ಇಸ್ರೇಲ್ ನೌಕಾಪಡೆಯಿಂದ ನಾಲ್ವರು ಪಾಲಿಸ್ತೇನ್ ಉಗ್ರರ ಹತ್ಯೆ
ಜೆರುಸಲೇಂ, ಸೋಮವಾರ, 7 ಜೂನ್ 2010( 17:11 IST )
ಗಾಜಾ ಪಟ್ಟಿಯ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಮುಳುಗು ದಿರಿಸುಗಳನ್ನು ಧರಿಸಿದ್ದ ನಾಲ್ವರು ಪಾಲಿಸ್ತೇನ್ ಭಯೋತ್ಪಾದಕರನ್ನು ಇಸ್ರೇಲ್ ನೌಕಾಪಡೆಯು ಸೋಮವಾರ ಮುಂಜಾನೆ ಕೊಂದು ಹಾಕಿದೆ.
ಪಾಲಿಸ್ತೇನ್‌ಗೆ ಮಾನವೀಯ ನೆರವು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಹಡಗನ್ನು ಮುಳುಗಿಸುವ ಮೂಲಕ ಒಂಬತ್ತು ಮಂದಿಯನ್ನು ಕೊಂದು ಹಾಕಿದ್ದ ಇಸ್ರೇಲ್, ಆ ನಂತರ ಕೈಗೊಂಡಿರುವ ದೊಡ್ಡ ದಾಳಿ ಇದಾಗಿದೆ. ಮೊದಲ ದಾಳಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
20 ಮಂದಿಯ ಏಷಿಯನ್ ಸೆಕ್ಯುರಿಟಿ ಗ್ರೂಪ್ ಕಳೆದ ಸೋಮವಾರದ ಇಸ್ರೇಲ್ ದಾಳಿಯನ್ನು ಖಂಡಿಸುವ ನಿಟ್ಟಿನಲ್ಲಿ ಟರ್ಕಿಯ ಸಹಕಾರವನ್ನು ಕೋರಿ ಈಗಾಗಲೇ ಸಭೆಯನ್ನೂ ನಡೆಸಿದೆ.
ಇಂದು ನಾಲ್ವರು ಭಯೋತ್ಪಾದಕರು ಕುಕೃತ್ಯ ನಡೆಸುವ ಉದ್ದೇಶದಿಂದ ಸಿದ್ಧತೆ ನಡೆಸಿದ್ದರು. ಅವರನ್ನು ನಾವು ಕೊಂದು ಹಾಕಿರುವುದಾಗಿ ಇಸ್ರೇಲ್ ನೌಕಾ ಪಡೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಗಾಜಾ ಪಟ್ಟಿಗೆ ಮಾನವೀಯ ನೆಲೆಯಲ್ಲಿ ನೆರವು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಮತ್ತೊಂದು ನೌಕೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಅದರಲ್ಲಿ ಗಾಯಗೊಂಡಿದ್ದ ನಾಲ್ವರನ್ನು ಇಸ್ರೇಲ್ ಪಡೆಗಳು ಸಮುದ್ರಕ್ಕೆ ಎಸೆದಿವೆ ಎಂದು ಆರೋಪಿಸಲಾಗಿದೆ.
ಇಸ್ರೇಲ್ ಪಡೆಗಳು ಶರಣಾಗತರಾದವರ ಮೇಲೂ ದಾಳಿಗಳನ್ನು ನಡೆಸುತ್ತಿವೆ. ಅವುಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿವೆ ಎಂದು ಈ ಹಡಗಿನಲ್ಲಿದ್ದ ಇದ್ರಿಸ್ ಸಿಮ್ಸೆಕ್ ಎಂಬ ಕಾರ್ಯಕರ್ತರೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.