2008ರ ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಅಮಾನತುಗೊಂಡ ಭಾರತ-ಪಾಕಿಸ್ತಾನ ಮಾತುಕತೆಯಿಂದಾಗಿ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಶಾಂತಿ ವಿರೋಧಿಗಳಿಗೆ ಅವಕಾಶ ನೀಡಿದಂತಾಗಿದೆ ಎಂದು ಪಾಕ್ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಸೋಮವಾರ ತಿಳಿಸಿದ್ದಾರೆ.
ಭಾರತದ ಜತೆಗಿನ ಎಲ್ಲಾ ಸಮಸ್ಯೆಗಳ ಕುರಿತು ಶಾಂತಿಯುತ ಪರಿಹಾರಕ್ಕಾಗಿ ಪಾಕಿಸ್ತಾನ ಬಯಸುತ್ತಿದೆ ಎಂಬ ಮಾತನ್ನು ಪುನರುಚ್ಛರಿಸಿರುವ ಗಿಲಾನಿ, ಮುಂಬೈ ದಾಳಿ ಹಿನ್ನೆಲೆಯಲ್ಲಿ ಮಾತುಕತೆ ಸ್ಥಗಿತಗೊಂಡಿದ್ದರಿಂದ ದುಷ್ಕರ್ಮಿಗಳು ತಮ್ಮ ಗುರಿಯನ್ನು ಈಡೇರಿಸಿಕೊಂಡಂತಾಗಿದೆ ಎಂದರು.
ಮಿಲಿಟರಿ ಮುಖ್ಯಸ್ಥ ಜನರಲ್ ಆಶ್ಪಕ್ ಫರ್ವೇಜ್ ಖಯಾನಿ ಸೇರಿದಂತೆ ಅಗ್ರ ಮಿಲಿಟರಿ ಅಧಿಕಾರಿಗಳನ್ನು ಕ್ವೆಟ್ಟಾದ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಲ್ಲಿ ಉದ್ದೇಶಿಸಿ ಮಾತನಾಡುತ್ತಾ ಈ ವಿಚಾರಗಳನ್ನು ಗಿಲಾನಿ ಹೊರಗೆಡವಿದರು.
ಪಾಕಿಸ್ತಾನದ ಪ್ರಕಾರ ಭಯೋತ್ಪಾದನೆ ಮತ್ತು ಶಾಂತಿ ಪ್ರಕ್ರಿಯೆಯನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು, ಅವೆರಡನ್ನೂ ಪ್ರತ್ಯೇಕ ದೃಷ್ಟಿಕೋನದಿಂದ ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ನಾಯಕತ್ವವು ಸ್ಥಗಿತಗೊಂಡಿರುವ ಸಮಗ್ರ ಮಾತುಕತೆಯನ್ನು ಪುನರಾರಂಭಿಸಲು ಬದ್ಧವಾಗಿದೆ. ನಮ್ಮ ರಾಜತಾಂತ್ರಿಕತೆಗೆ ಗೆಲುವು ಲಭಿಸುವ ಸಲುವಾಗಿ ಮಾತುಕತೆ ಅಗತ್ಯವಾಗಿದ್ದು, ಮಾತುಕತೆ ಆರಂಭಕ್ಕೆ ಅಂತಾರಾಷ್ಟ್ರೀಯ ಬೆಂಬಲ ಬೇಕಿದೆ ಎಂದರು.
ದುರದೃಷ್ಟಕರ ವಿಚಾರವೆಂದರೆ ಭಾರತ ಮತ್ತು ಪಾಕಿಸ್ತಾನಗಳ ನಾಯಕರುಗಳು ನೇರ ಮಾತುಕತೆ ನಡೆಸುವ ಬದಲು ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಮಾತುಕತೆ ನಡೆಸುತ್ತಿವೆ. ಇದು ನೇರ ಮಾತುಕತೆಗೆ ವರ್ಗಾವಣೆಯಾಗಬೇಕು ಎಂದೂ ಗಿಲಾನಿ ಒತ್ತಾಯಿಸಿದ್ದಾರೆ.