ಪ್ರವಾದಿ ಮೊಹಮ್ಮದ್ ಪೈಗಂಬರ್ ರೇಖಾಚಿತ್ರವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮೇಲೆ ಹೇರಿದ್ದ ನಿಷೇಧವನ್ನು ಬಾಂಗ್ಲಾ ಸರ್ಕಾರ ವಾಪಸ್ ಪಡೆದಿದೆ.
ಧರ್ಮ ನಿಂದನೆಯ ಬರಹ ಮತ್ತು ಪೈಗಂಬರ್ ಅವರ ರೇಖಾಚಿತ್ರವನ್ನು ತೆಗೆದುಹಾಕಲು ಅಮೆರಿಕ ಮೂಲದ ಫೇಸ್‌ಬುಕ್ ಒಪ್ಪಿಕೊಂಡ ಕಾರಣ ಫೇಸ್‌ಬುಕ್ ಮೇಲೆ ವಿಧಿಸಿದ್ದ ನಿಷೇಧವನ್ನು ರದ್ದುಪಡಿಸುವಂತೆ ಬಾಂಗ್ಲಾದೇಶ ಟೆಲಿಕಮ್ಯೂನಿಕೇಷನ್ ರೆಗ್ಯುಲೇಟರಿ ಕಮಿಷನ್(ಬಿಟಿಆರ್‌ಸಿ) ಇಂಟರ್‌ನ್ಯಾಷನಲ್ ಇಂಟರ್ನೆಟ್ ಗೇಟ್‌ವೇ ಪ್ರೋವೈಡರ್ಸ್‌ಗೆ ಆದೇಶ ನೀಡಿದೆ.
ಆ ನಿಟ್ಟಿನಲ್ಲಿ ದೇಶಾದ್ಯಂತ ಫೇಸ್‌ಬುಕ್ ಸಂಪರ್ಕ ಎಲ್ಲರಿಗೂ ಲಭ್ಯವಾಗಲಿದೆ ಎಂದು ಬಿಟಿಆರ್‌ಸಿ ಉಪಾಧ್ಯಕ್ಷ ಹಸನ್ ಮಹಮ್ಮದ್ ಡೆಲ್ವಾರ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಫೇಸ್‌ಬುಕ್‌ಗೆ ನಿಷೇಧ ಹೇರಿ ವಾಪಸ್ ಪಡೆದ ಬೆನ್ನಲ್ಲೇ, ಬಾಂಗ್ಲಾದೇಶ ಕೂಡ, ಪ್ರವಾದಿ ಮೊಹಮ್ಮದ್ ಪೈಗಂಬರ್ ಮತ್ತು ದೇಶದ ನಾಯಕರನ್ನು ಅಗೌರವಯುತವಾಗಿ ವ್ಯಂಗ್ಯಚಿತ್ರ ಬಿಡಿಸಿದ ಕಾರಣಕ್ಕಾಗಿ ಫೇಸ್‌ಬುಕ್ ಮೇಲೆ ನಿಷೇಧ ಹೇರಿತ್ತು. ಇಸ್ಲಾಮ್ ವಿರೋಧಿ ಬರಹ ಮತ್ತು ಧಾರ್ಮಿಕ ನಿಂದನೆಯ ಬರಹಗಳು ಈ ಸಂಪರ್ಕ ತಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಂಗ್ಲಾ ತಿಳಿಸಿತ್ತು.