ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಏಳು ಮಂದಿ ನ್ಯಾಟೋ ಸೈನಿಕರು ಸಾವನ್ನಪ್ಪಿದ್ದು ಒಟ್ಟು ಒಂದೇ ದಿನದಲ್ಲಿ ಹತ್ತು ಮಂದಿ ಸಾವನ್ನಪ್ಪಿದಂತಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಹತ್ತು ಮಂದಿ ಐಎಸ್ಎಎಫ್ ಸೈನಿಕರು ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ಅಂತಾರಾಷ್ಟ್ರೀಯ ಭದ್ರತಾ ಪಡೆಯ ವಕ್ತಾರ ವಿವರಿಸಿದ್ದಾರೆ.
ಪಶ್ಚಿಮ ಅಫ್ಘಾನಿಸ್ತಾದನಲ್ಲಿ ಉಗ್ರರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟದಲ್ಲಿ ಐದು ಮಂದಿ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸೈನಿಕ ಗುಂಡಿನ ದಾಳಿಗೆ ಬಲಿಯಾಗಿದ್ದು, ಇನ್ನೋರ್ವ ಸೈನಿಕ ದಕ್ಷಿಣ ಪ್ರದೇಶದಲ್ಲಿ ಐಇಡಿ ಸ್ಫೋಟದಲ್ಲಿ ಸಾವನ್ನಪ್ಪಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ನ್ಯಾಟೋ ಪಡೆ ಮೇಲೆ ಇತ್ತೀಚೆಗಷ್ಟೇ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಅದರಲ್ಲಿ ಓರ್ವ ಅಮೆರಿಕನ್ ಸೈನಿಕ ಮೃತಪಟ್ಟಿದ್ದ. ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದ ಕಂದಾಹಾರ್ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ತಾಲಿಬಾನ್ ಉಗ್ರರ ವಿರುದ್ಧ ನ್ಯಾಟೋ, ಅಮೆರಿಕ ಮತ್ತು ಅಫ್ಘಾನ್ ಸೈನಿಕರ ಪಡೆ ಕಾರ್ಯಾಚರಣೆ ನಡೆಸುತ್ತಿದೆ.