ನೇಪಾಳದಲ್ಲಿ ನೂತನ ಸಂವಿಧಾನವನ್ನು ಜಾರಿಗೆ ತರಲು ಆಡಳಿತ ಪಕ್ಷಗಳು ವಿಫಲವಾಗಿರುವ 11 ದಿನಗಳ ಬಳಿಕ ಇದೀಗ ದೇಶದ ರಾಜಧಾನಿ ಕಾಠ್ಮಂಡುವಿನ ಜನನಿಬಿಢ ಪ್ರದೇಶದಲ್ಲಿ ಮಂಗಳವಾರ ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಇದು ನಡೆದ ಕೇವಲ ಗಂಟೆಯೊಳಗೆ 'ಸ್ವತಂತ್ರ ನೇಪಾಳ ದಳ' ಎಂಬ ನೂತನ ಸಂಘಟನೆಯೊಂದು ಘಟನೆಯ ಹೊಣೆ ಹೊತ್ತುಕೊಂಡು ಪತ್ರಿಕೆಗಳಿಗೆ ಇಮೇಲ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಮೇ 28ರೊಳಗೆ ಬಹುನಿರೀಕ್ಷಿತ ನೂತನ ಸಂವಿಧಾನವನ್ನು ಜಾರಿಗೆ ತರಲು ವಿಫಲವಾಗಿರುವ ಸಂಸದರು ಮತ್ತು ನೇಪಾಳದ ಪ್ರಮುಖ ಪಕ್ಷಗಳ ವಿರುದ್ಧ ತಾನು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಂಘಟನೆ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.
ಕಾಠ್ಮಂಡುವಿನ ಜನನಿಬಿಢ ಮಹಾರಾಜ್ ಗಂಜ್ ಪ್ರದೇಶದ ವಸುಂಧರಾ ಸಮೀಪವಿರುವ ಇಶಾನ್ ಎಮರ್ಜೆನ್ಸಿ ಆಸ್ಪತ್ರೆಯ ಬಳಿ ಇಂದು ಮುಂಜಾನೆ ಬಿಳಿ ಮಾರುತಿ ಕಾರೊಂದು ನಿಂತಿತ್ತು. ಅದರಲ್ಲಿದ್ದ ಪ್ರಯಾಣಿಕರು ಹೊರಗೆ ಹೋಗಿದ್ದರು. ಅವರು ವಾಪಸ್ ಬರುವ ಮೊದಲು ಸುಮಾರು ಎಂಟು ಗಂಟೆಯ ಹೊತ್ತಿಗೆ ಕಾರು ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
10 ವರ್ಷಗಳ ತುರ್ತು ಪರಿಸ್ಥಿತಿ, ಸೇನಾ ಹೆಲಿಕಾಫ್ಟರುಗಳ ಮೇಲೆ ದಾಳಿ ಸೇರಿದಂತೆ ಸಾಕಷ್ಟು ಅನಾಹುತಕಾರಿ ಇತಿಹಾಸವನ್ನು ಕಂಡಿರುವ ನೇಪಾಳದಲ್ಲಿ ಕಾರ್ ಬಾಂಬ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲು.
ತಕ್ಷಣವೇ ತನಿಖಾ ತಂಡ ಕಾರ್ಯಪ್ರವೃತ್ತವಾಗಿದ್ದು, ಸ್ಥಳದಲ್ಲಿದ್ದ ಒಂದು ಜೀವಂತ ಬಾಂಬನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿದೆ. ಈ ಸ್ಥಳವನ್ನು ಅಪಾಯ ಮುಕ್ತ ಪ್ರದೇಶವನ್ನಾಗಿ ಘೋಷಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಬೀಣ್ ಪೊಖ್ರೆಲ್ ತಿಳಿಸಿದ್ದಾರೆ.