ವಾಣಿಜ್ಯ ನಗರಿ ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿಯಾಗಿರುವ ಪಾಕಿಸ್ತಾನ್ ಮೂಲದ ಅಮೆರಿಕದ ಪ್ರಜೆ ಡೇವಿಡ್ ಹೆಡ್ಲಿಯನ್ನು ಭಾರತದ ಅಧಿಕಾರಿಗಳು ಕಳೆದ ಒಂದು ವಾರದಿಂದ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ತನಿಖೆಯ ವಿವರಗಳ ಬಗ್ಗೆ ಅಮೆರಿಕದ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ.
ಹೆಡ್ಲಿ ತನಿಖೆಯ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕ ಅಟಾರ್ನಿ ಕಚೇರಿಯ ವಕ್ತಾರ ರಾಂದಾಲ್ಲಾ ಸಾಂಬೋರ್ನ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಎರಡೂ ಸರ್ಕಾರಗಳ ನುರಿತ ಅಧಿಕಾರಿಗಳು ಹೆಡ್ಲಿಯ ವಿಚಾರಣೆ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ತನಿಖೆ ಕುರಿತು ಯಾವುದೇ ವಿವರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭದ್ರತೆಯ ದೃಷ್ಟಿಯಿಂದಾಗಿ ಹೆಡ್ಲಿ ವಿಚಾರಣೆ ವೇಳೆ ಏನೆಲ್ಲಾ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ ಎಂಬ ವಿವರ ನೀಡಲು ಸಾಧ್ಯವಿಲ್ಲ ಎಂದು ಮಂಗಳವಾರ ಎಫ್‌ಬಿಐ ಅಧಿಕಾರಿಗಳು ಕೂಡ ತಿಳಿಸಿದ್ದಾರೆ.
26/11 ಘಟನೆ ಭಾರತದ ವ್ಯಾಪ್ತಿಗೆ ಸೇರಿದ ವಿಷಯವಾಗಿದೆ. ಹಾಗಾಗಿ ಭಾರತದ ಅಧಿಕಾರಿಗಳು ನಡೆಸಿದ ತನಿಖೆ ಬಗ್ಗೆ ವಿವರ ನೀಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಏತನ್ಮಧ್ಯೆ, ಹೆಡ್ಲಿಯ ವಕೀಲ ಜಾನ್ ಥೈಯ್ಸ್ ಕೂಡ ಪ್ರತಿಕ್ರಿಯೆ ನೀಡಲು ಲಭ್ಯವಾಗಿಲ್ಲ. ಮುಂಬೈ ದಾಳಿ ಪ್ರಕರಣ ಕುರಿತಂತೆ ಡೇವಿಡ್ ಹೆಡ್ಲಿಯನ್ನು ವಿಚಾರಣೆಗೊಳಪಡಿಸಲು ಅಮೆರಿಕ ಭಾರತಕ್ಕೆ ಅನುಮತಿ ನೀಡಿತ್ತು. ಆ ನೆಲೆಯಲ್ಲಿ ಭಾರತದ ಎನ್ಐಎ ಅಧಿಕಾರಿಗಳ ತಂಡ ಕಳೆದವಾರ ಅಮೆರಿಕಕ್ಕೆ ತೆರಳಿ, ಹೆಡ್ಲಿಯ ವಿಚಾರಣೆ ನಡೆಸುತ್ತಿದೆ. ಆದರೆ ಯಾವ ಸಂದರ್ಭದಲ್ಲಿ ಅವರಿಗೆ ವಿಚಾರಣೆಗೆ ಅವಕಾಶ ನೀಡಲಾಯಿತು. ಯಾವೆಲ್ಲ ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಅಂಶ ಮಾತ್ರ ಬಹಿರಂಗಗೊಂಡಿಲ್ಲ.