ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿಗಾಗಿ ಅಮೆರಿಕಾಕ್ಕೆ ಇಸ್ರೇಲ್ ಬೇಡಿಕೆ
ಜೆರುಸಲೇಂ, ಮಂಗಳವಾರ, 8 ಜೂನ್ 2010( 17:21 IST )
ತನ್ನ ಆಪ್ತಮಿತ್ರ ಅಮೆರಿಕಾದಿಂದ ಭಾರೀ ಪ್ರಮಾಣದ ಯುದ್ಧ ಸಾಮಗ್ರಿ ಮತ್ತು ಮದ್ದುಗುಂಡುಗಳನ್ನು ಬೇಕೆಂದು ಇಸ್ರೇಲ್ ಬೇಡಿಕೆಯನ್ನಿಟ್ಟಿದ್ದು, ಈ ಪ್ರಾಂತ್ಯದಲ್ಲಿ ಸಂಭಾವ್ಯ ಮಿಲಿಟರಿ ಸಂಘರ್ಷದ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ಇಸ್ರೇಲ್ ತನ್ನ ವಾಯುಪಡೆಗೆ ಜಂಟಿ ನೇರ ವಾಯು ದಾಳಿಯ ಬಾಂಬ್‌ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬೇಕೆಂದು ಬೇಡಿಕೆಯಿಟ್ಟಿದೆ. ಅಲ್ಲದೆ ಅಗತ್ಯ ಬಿದ್ದಾಗ ವಿಸ್ತರಿಸುವ ಅವಕಾಶವಿರುವ ಪ್ರಸಕ್ತ ಅಮೆರಿಕಾ ಸೇನೆಯಿಂದ ತಡೆಯಲ್ಪಟ್ಟಿರುವ ತುರ್ತು ಶಸ್ತ್ರಾಸ್ತ್ರ ಗೋದಾಮುಗಳನ್ನು ವಿಸ್ತರಿಸುವ ಬೇಡಿಕೆಯನ್ನು ಕೂಡ ಮುಂದಿಟ್ಟಿದೆ ಎಂದು 'ಹಾರೆಟ್ಜ್' ಪತ್ರಿಕೆ ವರದಿ ಮಾಡಿದೆ.
ಇತ್ತೀಚೆಗಷ್ಟೇ ವಾಷಿಂಗ್ಟನ್ ಭೇಟಿ ನೀಡಿದ್ದ ಇಸ್ರೇಲ್ ರಕ್ಷಣಾ ಸಚಿವ ಎಹೂದ್ ಬರಾಕ್ ಮತ್ತು ರಕ್ಷಣಾ ಸಚಿವಾಲಯದ ಮಹಾ ನಿರ್ದೇಶಕ ಉದಿ ಶಾನಿಯವರು ಆಡಳಿತ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಮನವಿಯನ್ನು ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಮುಂಬರುವ ಸಂಭಾವ್ಯ ಯುದ್ಧಕ್ಕೆ ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಗಂಭೀರ ಬೆದರಿಕೆಗಳಿರುವುದರಿಂದ ಮತ್ತು ಸಾಕಷ್ಟು ದಾಳಿಗಳ ಅವಕಾಶಗಳಿರುವುದರಿಂದ ದೇಶವು ವಾಯು ಪಡೆಯನ್ನು ಕೂಡ ವಿಸ್ತೃತವಾಗಿ ಬಳಸುವ ಕುರಿತು ಯೋಚನೆ ಮಾಡುತ್ತಿದೆ ಎಂದು ವರದಿ ಹೇಳಿದೆ.
ಅಮೆರಿಕಾ ಸೇನೆಯಿಂದ ಇಸ್ರೇಲ್‌ನಲ್ಲಿ ತಡೆ ಹಿಡಿಯಲ್ಪಟ್ಟಿರುವ ತುರ್ತು ಗೋದಾಮುಗಳನ್ನು ಶೇ.50ರಷ್ಟು ಹೆಚ್ಚಿಸುವ ಗುರಿಯನ್ನೂ ಇಸ್ರೇಲ್ ಹೊಂದಿದೆ. ಪ್ರಸಕ್ತ ಹೊಂದಿರುವ ಶಸ್ತ್ರಾಸ್ತ್ರ ಪ್ರಮಾಣವನ್ನು 800 ಅಮೆರಿಕನ್ ಡಾಲರುಗಳಿಂದ 1.2 ಬಿಲಿಯನ್ ಡಾಲರುಗಳಿಗೆ ಹೆಚ್ಚಿಸುವ ಚಿಂತನೆಯಲ್ಲಿದೆ.