ಬ್ರಿಟಿಷ್ ಡಿಟೆಕ್ಟಿವ್ಸ್ ಮತ್ತು ಗಾಂಬಿಯನ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 2.5 ಟನ್ಸ್ ಕೊಕೈನ್ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಿರುವುದಾಗಿ ಭದ್ರತಾಪಡೆಯ ಮೂಲಗಳು ಮಂಗಳವಾರ ತಿಳಿಸಿವೆ.
ಪಶ್ಚಿಮ ಆಫ್ರಿಕಾ ಇದೀಗ ಕೊಕೈನ್ ಬೆಳೆಯ ಪ್ರಮುಖ ದೇಶವಾಗಿದ್ದು, ಅಕ್ರಮ ಸಾಗಾಟಗಾರರಿಗೆ ಲ್ಯಾಟಿನ್ ಅಮೆರಿಕ ಮಾರುಕಟ್ಟೆ ಪ್ರಮುಖ ವಹಿವಾಟು ಸ್ಥಳವಾಗಿರುವುದರಿಂದ ನೂರಾರು ಟನ್ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಬಿಯಾ ಪೊಲೀಸರು ವಶಪಡಿಸಿಕೊಂಡ ಕೊಕೈನ್ ಬೆಲೆ 1ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಗಾಂಬಿಯಾ ರಾಜಧಾನಿ ಬಂಜುಲಾದ ಹೊರವಲಯದ ಉಗ್ರಾಣವೊಂದರಲ್ಲಿ ಈ ಬೃಹತ್ ಮೊತ್ತದ ಕೊಕೈನ್ ಅನ್ನು ಅಡಗಿಸಿ ಇಡಲಾಗಿತ್ತು ಎಂದು ಮೂಲಗಳು ಮಾಧ್ಯಮಗಳಿಗೆ ವಿವರಿಸಿವೆ.
ಕಾರ್ಯಾಚರಣೆ ಸಂದರ್ಭದಲ್ಲಿ ಅಡಗಿಸಿಟ್ಟ ಹಣ ಮತ್ತು ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಯುರೋಪ್ ದೇಶದವರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.