ತಾಲಿಬಾನ್ ಉಗ್ರರು ಸ್ವಾತ್ ಪ್ರವೇಶಿಸುವಂತಿಲ್ಲ: ಇಮಾಮ್ ಘೋಷಣೆ
ಪೇಶಾವರ, ಬುಧವಾರ, 9 ಜೂನ್ 2010( 13:42 IST )
ಪಾಕಿಸ್ತಾನದ ವಾಯುವ್ಯ ಭಾಗದ ಸ್ವಾತ್ ಪ್ರದೇಶಕ್ಕೆ ತಾಲಿಬಾನ್ ಉಗ್ರರು ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಇಸ್ಲಾಮ್ ಧರ್ಮಗುರುಗಳು ಘೋಷಿಸಿದ್ದಾರೆ. ಅಲ್ಲದೇ ಸ್ವಾತ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಕಾನೂನು ಸುವ್ಯವಸ್ಥೆಯನ್ನು ಮರಳಿ ತರುವಲ್ಲಿ ಪ್ರಯತ್ನಿಸಬೇಕೆಂಬುದಾಗಿಯೂ ಕೋರಿಕೊಂಡಿದ್ದಾರೆ.
ಸ್ವಾತ್ ಪ್ರದೇಶದ ಉಲೇಮಾ ಇ ಕಾರಮ್ ಮತ್ತು ಪೆಶ್ ಇಮಾಮ್ಸ್‌ನ ಸುಮಾರು 250 ಮಂದಿ ಈ ಘೋಷಣೆ ಹೊರಡಿಸಿದ್ದು, ಕಳೆದ ಎರಡು ವರ್ಷಗಳಿಂದ ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ತತ್ತರಿಸಿಹೋಗಿದೆ. ಆ ನಿಟ್ಟಿನಲ್ಲಿ ಮಿಲಿಟರಿ ಪಡೆಗಳು ಈ ಪ್ರದೇಶದಲ್ಲಿ ಮತ್ತೆ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ತಮ್ಮ ಬೆಂಬಲವನ್ನು ಮುಂದುವರಿಸುವುದಾಗಿಯೂ ತಿಳಿಸಿದ್ದಾರೆ.
ಸ್ವಾತ್ ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಕಾರ್ಯಾಚರಿಸುತ್ತಿರುವ ಮಿಲಿಟರಿ ಪಡೆಯ ಅಧಿಕಾರಿ ಬ್ರಿಗೇಡಿಯರ್ ಸಲ್ಮಾನ್ ಅಕ್ಬರ್ ಅವರನ್ನು ಮೌಲಾನಾ ಹಕೀಮುಲ್ಲಾ ಮತ್ತು ಮುಫ್ತಿ ಅಸ್‌ಮತುಲ್ಲಾ ನೇತೃತ್ವದ ತಂಡ ಭೇಟಿಯಾಗಿ ಮಾತುಕತೆ ನಡೆಸಿದ ನಂತರ, ಕಾಬೂಲ್ ಸಬ್ ಡಿವಿಷನ್‌ನ ಶಾಂತಿ ಸಮಿತಿಯ ಧರ್ಮಗುರುಗಳು, ಧಾರ್ಮಿಕ ಮುಖಂಡರು ಮತ್ತು ಸದ್ಯಸ್ಯರು, ಸ್ವಾತ್ ಪ್ರದೇಶದೊಳಕ್ಕೆ ತಾಲಿಬಾನ್ ಉಗ್ರರ ಪ್ರವೇಶಕ್ಕೆ ನಿರ್ಬಂಧ ಹೇರಿರುವುದಾಗಿ ಘೋಷಿಸಿದೆ.
ಇಸ್ಲಾಮ್‌ನಲ್ಲಿ ಭಯೋತ್ಪಾದಕರಿಗೆ ಯಾವುದೇ ಸ್ಥಾನ ಇಲ್ಲ, ಆದರೂ ಕೆಲವು ಪೂರ್ವಾಗ್ರಹ ಪೀಡಿತರು ಅಮಾಯಕ ಜನರ ಮನಸ್ಸನ್ನು ಧರ್ಮದ ಹೆಸರಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿರುವುದಾಗಿ ಇಮಾಮ್‌ರು ತಿಳಿಸಿದ್ದಾರೆ.