ಪಾಕಿಸ್ತಾನದ ಐಎಸ್ಐ ನಿರ್ದೇಶನದಂತೆ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆ ಮುಂಬೈ ಭಯೋತ್ಪಾದನಾ ದಾಳಿ ನಡೆಸಿರುವುದಾಗಿ ಭಾರತದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್ಐಎ)ಯ ವಿಚಾರಣೆ ವೇಳೆ ಡೇವಿಡ್ ಹೆಡ್ಲಿ ಬಾಯ್ಬಿಟ್ಟಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದ್ದು, ಈ ಮೂಲಕ ಭಾರತದ ಮಹತ್ವದ ಜಯ ಸಾಧಿಸಿದಂತಾಗಿದೆ.
ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಆರ್ಮಿ ಅಧಿಕಾರಿಗಳು ಕೂಡ ಶಾಮೀಲಾಗಿರುವುದಾಗಿಯೂ ಹೆಡ್ಲಿ ತನಿಖಾಧಿಕಾರಿಗಳ ಮುಂದೆ ವಿವರಣೆ ನೀಡಿರುವುದಾಗಿ ಇಂಗ್ಲಿಷ್ ದಿನಪತ್ರಿಕೆಯೊಂದರ ವರದಿ ತಿಳಿಸಿದೆ.
ಭಾರತದ ವಾಣಿಜ್ಯ ನಗರಿಯಾಗಿರುವ ಮುಂಬೈ ಮೇಲೆ ದಾಳಿ ನಡೆಸಲು ಯಾವ ರೀತಿಯಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯನ್ನೂ ದಾಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬನಾಗಿರುವ ಆರೋಪಿ ಹೆಡ್ಲಿ ಒಂದೊಂದೇ ಅಂಶವನ್ನು ಹೊರಹಾಕುತ್ತಿರುವುದಾಗಿ ವರದಿ ಹೇಳಿದೆ. ಅಲ್ಲದೇ ಪಾಕಿಸ್ತಾನದ ಸಾಜಿದ್ ಮಿರ್, ಅಬ್ದುರ್ ರೆಹಮಾನ್ ಸೈಯದ್ ಹಾಗೂ ಪಾಕಿಸ್ತಾನದ ಆರ್ಮಿ ಇಂಟಲಿಜೆನ್ಸ್ ಏಜೆಂಟ್ಸ್ ಮೇಜರ್ ಇಕ್ಬಾಲ್, ಸಮೀರ್ ಅಲಿ ಭಾಗಿ ಎಂದೂ ಹೇಳಿದ್ದಾನೆ.
ಮುಂಬೈ ದಾಳಿಯ ಸಂಚು ರೂಪಿಸಿದವರಲ್ಲಿ ಲಷ್ಕರ್ ಇ ತೊಯ್ಬಾ ಪ್ರಮುಖ ಪಾತ್ರ ವಹಿಸಿತ್ತು ಎಂದಿರುವ ಹೆಡ್ಲಿ, ಅದೇ ರೀತಿ ಅಲ್ ಖಾಯಿದಾ ಪ್ರಮುಖ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಕೂಡ ದಾಳಿಯ ಹಿಂದಿರುವುದಾಗಿ ತಿಳಿಸಿದ್ದಾನೆ.