ಸೈನಿಕನ ಭೇಟಿಯ ಹೊರತು ಗಾಜಾ ನಿರ್ಬಂಧ ಸಡಿಲವಿಲ್ಲ: ಇಸ್ರೇಲ್
ಜೆರುಸಲೇಂ, ಗುರುವಾರ, 10 ಜೂನ್ 2010( 17:41 IST )
ಇಸ್ಲಾಮಿಕ್ ಹಮಾಸ್ ಆಡಳಿತದ ವಶದಲ್ಲಿರುವ ತಮ್ಮ ಸೈನಿಕನನ್ನು ರೆಡ್ ಕ್ರಾಸ್‌ಗೆ ಭೇಟಿ ಮಾಡಲು ಅವಕಾಶ ನೀಡದ ಹೊರತು ಗಾಜಾ ಪಟ್ಟಿಯ ಮೇಲಿನ ದಿಗ್ಬಂಧವನ್ನು ವಾಪಸ್ ಪಡೆಯುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
2006ರಲ್ಲಿ ಹಮಾಸ್ ಸೆರೆ ಹಿಡಿದಿರುವ ನಮ್ಮ ಸೈನಿಕ ಗಿಲಾಡ್ ಶಾಲಿಟ್ ಅವರನ್ನು ರೆಡ್ ಕ್ರಾಸ್‌ಗೆ ಭೇಟಿ ಮಾಡಲು ನಿಯಮಿತವಾಗಿ ಅವಕಾಶ ನೀಡಬೇಕೆಂಬ ನಮ್ಮ ಕನಿಷ್ಠ ಬೇಡಿಕೆಯನ್ನು ಒಪ್ಪಿಕೊಳ್ಳದ ಹೊರತು ನಾವು ನಿರ್ಬಂಧವನ್ನು ಸಡಿಲಿಸುವುದಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಅವಿಗ್ಡಾರ್ ಲೈಬೆರ್ಮಾನ್ ತಿಳಿಸಿದ್ದಾರೆ.
ನಾವು ಹಾಕಿರುವ ಷರತ್ತನ್ನು ಪೂರ್ಣಗೊಳಿಸದ ಹೊರತು ಪರಿಸ್ಥಿತಿ ಬದಲಾವಣೆಯಾಗಲು ಯಾವುದೇ ಕಾರಣಗಳಿಲ್ಲ ಎಂದು ಸಚಿವರು ಹೇಳಿದ್ದಾರೆ.
ಆದರೆ ಇದನ್ನು ತಳ್ಳಿ ಹಾಕಿರುವ ಹಮಾಸ್, ಶಾಲಿಟ್ ಪ್ರಕರಣಕ್ಕೆ ಗಾಜಾ ನಿರ್ಬಂಧದ ಸಂಬಂಧ ಕಲ್ಪಿಸುವ ಮೂಲಕ ಇಸ್ರೇಲ್ ದಿಗ್ಬಂಧದ ಮುಕ್ತಿಗೆ ಯತ್ನಿಸುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನವನ್ನು ಮಣ್ಣು ಪಾಲು ಮಾಡಲು ಮತ್ತು ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಪ್ರತಿಕ್ರಿಯಿದೆ ಹಮಾಸ್.
ಶಾಲಿಟ್‌ರನ್ನು ಬಿಡುಗಡೆ ಮಾಡಬೇಕಾದರೆ ಇಸ್ರೇಲ್ ಸೆರೆ ಹಿಡಿದಿರುವ ನೂರಾರು ಪಾಲೆಸ್ತೇನ್ ಕೈದಿಗಳು, ಹಲವು ರಾಜಕೀಯ ನಾಯಕರು ಮತ್ತು ಅಗ್ರ ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕು ಎಂದು ಇಸ್ಲಾಮಿಕ್ ಸಂಘಟನೆ ಹೇಳಿದೆ.
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಹೇರಿರುವ ನಿರ್ಬಂಧವು ಅಂತಾರಾಷ್ಟ್ರೀಯ ವಲಯದಲ್ಲಿ ತೀವ್ರ ಟೀಕೆಗೊಳಗಾಗಿದೆ. ಅದರ ಪ್ರಕಾರ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳನ್ನು ಕೂಡ ಪಾಲೆಸ್ತೇನ್ ಗಾಜಾ ಪಟ್ಟಿಗೆ ಸಾಗಿಸುವಂತಿಲ್ಲ. ಇದೇ ಹಿನ್ನೆಲೆಯಲ್ಲಿ ಫ್ರೀಡಂ ಪ್ಲೋಟಿಲ್ಲಾ ಕಾರ್ಯಕರ್ತರು ಸಾಗುತ್ತಿದ್ದ ಹಡಗಿನ ಮೇಲೆ ಮೇ 31ರಂದು ದಾಳಿ ನಡೆಸಿದ್ದ ಇಸ್ರೇಲ್, ಒಂಬತ್ತು ಮಂದಿಯನ್ನು ಕೊಂದು ಹಾಕಿತ್ತು.