ಉಪಗ್ರಹವನ್ನು ಹೊತ್ತ ರಾಕೆಟ್ ಉಡ್ಡಯನಗೊಂಡ ಮೂರೇ ನಿಮಿಷಗಳಲ್ಲಿ ಕಕ್ಷೆ ತಲುಪುವ ಮೊದಲೇ ಸ್ಫೋಟಗೊಂಡಿದೆ ಎಂದು ದಕ್ಷಿಣ ಕೊರಿಯಾ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ತಿಳಿಸಿದ್ದಾರೆ.
ನಾರೊ-I ರಾಕೆಟ್ ಉಡ್ಡಯನಗೊಂಡ 137 ಸೆಕೆಂಡುಗಳ ನಂತರ ಭೂಮಿಯಿಂದ ನಿಯಂತ್ರಣ ಕಳೆದುಕೊಂಡು ಸ್ಫೋಟಗೊಂಡಿದೆ. ಬಹುಶಃ ನಾರೊ ರಾಕೆಟ್‌ನಲ್ಲೇ ಸ್ಫೋಟಗೊಂಡಿದೆ ಎಂದುಕೊಂಡಿದ್ದೇವೆ ಎಂದು ಸಚಿವ ಆಹ್ನ್ ಬ್ಯಾಂಗ್-ಮ್ಯಾನ್ ವಿವರಣೆ ನೀಡಿದ್ದಾರೆ.
ಹವಾಮಾನ ಬದಲಾವಣೆ ಕುರಿತ ಅಧ್ಯಯನಕ್ಕೆ ಈ ಉಪಗ್ರಹವನ್ನು ಉಡ್ಡಯಿಸಲಾಗಿತ್ತು ಎಂದು ಹೇಳಲಾಗಿದೆ.
ದಕ್ಷಿಣ ಸಿಯೋಲ್‌ನಿಂದ 465 ಕಿಲೋ ಮೀಟರ್ ದೂರದಲ್ಲಿರುವ ಗೋಹೆಂಗ್ ನಾರೊ ಬಾಹ್ಯಾಕಾಶ ಕೇಂದ್ರದಿಂದ ತಾಂತ್ರಿಕ ದೋಷಗಳಿಂದಾಗಿ ಒಂದು ದಿನ ತಡವಾಗಿ ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು.
ರಾಕೆಟ್ ಉಡ್ಡಯನ ಮಾಡುವ ಮೊದಲ ಹಂತ ಯಶಸ್ವಿಯಾಗಿತ್ತು. ಜಾಗತಿಕ ತಾಪಮಾನ ಏರಿಕೆ ಕುರಿತು ಅಧ್ಯಯನ ನಡೆಸುವ ಉಪಗ್ರಹವನ್ನು ಇದು ಹೊತ್ತಿತ್ತು. ಆದರೆ ಉಡ್ಡಯನಗೊಂಡ ಕೆಲ ಹೊತ್ತಿನ ನಂತರ ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ಅದರ ಸಂಪರ್ಕವನ್ನು ಕಳೆದುಕೊಂಡರು ಎಂದು ಕೊರಿಯಾ ಬಾಹ್ಯಾಕಾಶ ಅಧ್ಯಯನ ಕೇಂದ್ರ ತಿಳಿಸಿದೆ.
ಇದರೊಂದಿಗೆ ದಕ್ಷಿಣ ಕೊರಿಯಾ ತನ್ನ ಭೂಪ್ರದೇಶದಿಂದ ಹಾರಿಸಲು ಯತ್ನಿಸಿದ ಎರಡೂ ರಾಕೆಟ್‌ಗಳು ವಿಫಲಗೊಂಡಂತಾಗಿದೆ. ಈ ಹಿಂದೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆಸಿದ ಯತ್ನವೂ ವಿಫಲವಾಗಿತ್ತು.
ಕೊರಿಯಾ 1992ರಿಂದ ಇದುವರೆಗೆ ವಿದೇಶಿ ನೆಲದಲ್ಲಿ 11 ರಾಕೆಟ್‌ಗಳನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಇವೆಲ್ಲವೂ ವಿದೇಶಿ ನಿರ್ಮಿತ ರಾಕೆಟ್‌ಗಳಾಗಿದ್ದವು.