ಮಗುವನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದು, ಸಾವು-ಬದುಕಿನ ಹೋರಾಟ ನಡೆಸಿದ ಅಜ್ಜಿಯೊಬ್ಬಳು ಕೊನೆಗೂ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಪ್ರಪಂಚದ ಅತಿ ಹೆಚ್ಚಿನ ವಯಸ್ಸಿನ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್‌ವೋ ದೇವಿ ಲೋಹಾನ್ ಎಂಬ 70ರ ಹರೆಯದ ಅಜ್ಜಿ ವಿವಾದಿತ ಐವಿಎಫ್ ಮತ್ತು ಅಂಡಾಣು ಉತ್ಪತ್ತಿ ತಂತ್ರಜ್ಞಾನದಿಂದ ಗರ್ಭಿಣಿಯಾಗಿದ್ದರು. ಬಹಳಷ್ಟು ನಿಶ್ಯಕ್ತಿಯಿಂದ ಬಳಲಿ ಆಸ್ಪತ್ರೆಯ ಹಾಸಿಗೆಯಲ್ಲಿಯೇ ಇದ್ದ ಅಜ್ಜಿಯ ಮುಖದಲ್ಲೀಗ ಸಂತಸದ ನಗು ಮೂಡಿದೆ. ಯಾಕೆಂದರೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
'ಮಗು ಪಡೆಯುವುದು ನನ್ನ ಜೀವಮಾನದ ಕನಸಾಗಿತ್ತು. ನಿಜಕ್ಕೂ ಮಗು ಪಡೆಯುವ ಕನಸಿನಿಂದ ಮುಂದೆ ನನ್ನ ಅನಾರೋಗ್ಯ, ವಯಸ್ಸು ನನಗೆ ದೊಡ್ಡ ಸಮಸ್ಯೆ ಅನ್ನಿಸಲೇ ಇಲ್ಲ. ಯಾಕೆಂದರೆ ನಾನು ತಾಯಿಯಾಗಬೇಕೆಂಬುದು ಮುಖ್ಯವಾಗಿತ್ತು' ಎಂದು ಲೋಹಾನ್ ಸಂತಸ ವ್ಯಕ್ತಪಡಿಸಿರುವುದಾಗಿ ದಿ ಸನ್ ಪತ್ರಿಕೆ ವರದಿ ತಿಳಿಸಿದೆ.
ಲೋಹಾನ್ ಮತ್ತು ಆಕೆಯ ಪತಿ ಅಶಿಕ್ಷಿತ ರೈತರಾಗಿದ್ದರು. ಆದರೆ ಈ ವಯಸ್ಸಿನಲ್ಲಿ ಮಗು ಹೆರುವುದು ಸರಿಯಲ್ಲ ಎಂಬ ವಿಷಯ ಅವರ ಗೊತ್ತಿರಲೇ ಇಲ್ಲವಂತೆ!.ಅಲ್ಲದೇ ಈ ವಯಸ್ಸಿನಲ್ಲಿ ಮಗು ಹೆರುವುದು ತುಂಬಾ ಅಪಾಯಕಾರಿ ಎಂಬ ವಿಚಾರವನ್ನು ವೈದ್ಯರು ಕೂಡ ನನಗೆ ತಿಳಿಸಿಲ್ಲ ಎಂದು ಅಜ್ಜಿ ವಿವರಿಸಿದ್ದಾರೆ. ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯವಾಗಿದ್ದೆ, ಆದರೆ ಹೆರಿಗೆಯ ನಂತರ ತುಂಬಾ ನಿಶ್ಯಕ್ತಿಯಾಗಿರುವುದಾಗಿ ತಿಳಿಸಿದ್ದಾರೆ.
ವಯಸ್ಸಿನ ಕಾರಣದಿಂದಾಗಿ ಲೋಹಾನ್ ಹೆರಿಗೆಯ ನಂತರ ಹೆಚ್ಚಿನ ರಕ್ತಸ್ರಾವವಾಗಿದೆ. ಎರಡು ಸರ್ಜರಿಯನ್ನು ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಜ್ಜಿಗೆ ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಆದರೆ ಆಕೆ ಅದನ್ನು ನಿರ್ಲಕ್ಷಿಸಿದ್ದರಿಂದ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ. ಇದೀಗ ಅಜ್ಜಿಯ ಮಗುವನ್ನು ಆಕೆಯ ತಂಗಿ ನೋಡಿಕೊಳ್ಳುತ್ತಿದ್ದಾರೆ.
ಅಜ್ಜ-ಅಜ್ಜಿ ಇಬ್ಬರು ಮಗುವಿನ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲವಂತೆ, ಯಾಕೆಂದರೆ ಮಗುವಿನ ಬಗ್ಗೆ ಸಂಬಂಧಿಗಳು ನಿಗಾ ವಹಿಸಲಿದ್ದಾರೆ ಎಂಬ ವಿಶ್ವಾಸ ಅವರದ್ದು.
ಈ 70ರ ವಯಸ್ಸಿನಲ್ಲಿ ಲೋಹಾನ್ ಮಗುವಿಗೆ ಜನ್ಮ ನೀಡಿರುವುದೇ ಹೆಚ್ಚಿನ ತೊಂದರೆಗೆ ಕಾರಣವಾಗಿದೆ ಎಂದು ಡಾ.ಅನುರಾಗ್ ಬಿಸ್ನೋಯ್ ತಿಳಿಸಿದ್ದಾರೆ. ಆದರೂ ಅಜ್ಜಿಯ ದೇಹಸ್ಥಿತಿ ತುಂಬಾ ದುಸ್ಥಿತಿಯಲ್ಲಿದೆ. ಕೊನೆ ಪಕ್ಷ ಆಕೆ ನೆಮ್ಮದಿಯಿಂದ ಸಾವನ್ನಪ್ಪಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.