ನ್ಯೂಜಿಲ್ಯಾಂಡ್‌ನಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನನ್ನು ಹತ್ಯೆಗೈದಿರುವ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಚೀನಾ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
23ರ ಹರೆಯದ ಶಂಕಿತ ವ್ಯಕ್ತಿಯನ್ನು ಕಳೆದ ಗುರುವಾರ ಚೀನಾದಲ್ಲಿ ಬಂಧಿಸಲಾಗಿದೆ ಎಂದು ದಿ ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ಹೇಳಿದೆ. ಬಂಧನದ ಮಾಹಿತಿಯಂತೆ ನ್ಯೂಜಿಲ್ಯಾಂಡ್ ಅಧಿಕಾರಿಗಳು ಚೀನಾಕ್ಕೆ ಶುಕ್ರವಾರ ತೆರಳಿದ್ದರು. ತನಿಖೆ ಕುರಿತಂತೆ ಚೀನಾದ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ನ್ಯೂಜಿಲ್ಯಾಂಡ್ ಅಧಿಕಾರಿಗಳು ಹೇಳಿದ್ದಾರೆ.
ಇಬ್ಬರು ಮಕ್ಕಳ ತಂದೆಯಾಗಿದ್ದ 39ರ ಹರೆಯದ ಹಿರೆನ್ ಮೋಹಿನ್ ಎಂಬವರನ್ನು ಜನವರಿ 31ರಂದು ಇರಿದು ಹತ್ಯೆಗೈಯಲಾಗಿತ್ತು. ಆರೋಪಿಯನ್ನು ಚೀನಾದಲ್ಲಿ ಸೆರೆ ಹಿಡಿದಿರುವ ಬಗ್ಗೆ ಮೋಹಿನ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ನ್ಯೂಜಿಲ್ಯಾಂಡ್ ಅಧಿಕಾರಿಗಳು ತಿಳಿಸಿದ್ದಾರೆ.