ಭಾರತೀಯ ವಿದ್ಯಾರ್ಥಿ ನಿತಿನ್ ಗಾರ್ಗ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಪೊಲೀಸ್ ತನಿಖಾ ತಂಡ ಶುಕ್ರವಾರ ಎರಡನೇ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿಯೇ ನಿತಿನ್ ಹತ್ಯೆ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆ ಬರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ನಿಟ್ಟಿನಲ್ಲಿ ಗಾರ್ಗ್ ಪ್ರಕರಣದ ಬಗ್ಗೆ ತೀವ್ರ ತನಿಖೆಗೆ ಮುಂದಾಗಿದ್ದ ಅಧಿಕಾರಿಗಳು ಗುರುವಾರ 16ರ ಹರೆಯದ ಬಾಲಕನೊಬ್ಬನನ್ನು ಯಾರ್ರಾವಿಲ್ಲೆ ಎಂಬಲ್ಲಿ ಸೆರೆ ಹಿಡಿದಿದ್ದರು. ಆದರೆ ಕೊಲೆಯ ಹಿಂದೆ ಯಾವುದೇ ಜನಾಂಗೀಯ ದ್ವೇಷದ ಉದ್ದೇಶ ಇಲ್ಲವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿತಿನ್ ಗಾರ್ಗ್ ಹತ್ಯೆಯ ಹಿಂದೆ ಜನಾಂಗೀಯ ದ್ವೇಷ ಇದೆ ಎಂಬ ಅಂಶ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಅಪರಾಧ ಪತ್ತೆ ದಳದ ಅಧಿಕಾರಿ ಬೆರ್ನೈ ಎಡ್ವರ್ಡ್ಸ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೆರೆಹಿಡಿದಿರುವ ಎರಡನೇ ಬಾಲಕನ ಹೆಸರನ್ನು ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನವೂ ಬಹಿರಂಗಪಡಿಸಿಲ್ಲ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಆತನ ತಾಯಿ ಕೂಡ ಹಾಜರಿದ್ದು, ದುಃಖತಪ್ತರಾಗಿದ್ದರು. ನ್ಯಾಯಾಲಯದ ವಿಚಾರಣೆ ನಂತರ ಆತನನ್ನು ಕಸ್ಟಡಿಗೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.