ದೇಶದ ದಕ್ಷಿಣ ಭಾಗದಲ್ಲಿ ನಡೆದ ಜನಾಂಗೀಯ ಘರ್ಷಣೆಗಳಿಗೆ ಬಲಿಯಾದವರ ಸಂಖ್ಯೆ 2,000ಕ್ಕೇರಿದೆ ಎಂದು ಹಿಂಸಾಚಾರ ನಡೆದ ನಗರಕ್ಕೆ ಮೊತ್ತ ಮೊದಲ ಬಾರಿ ಭೇಟಿ ನೀಡಿದ ಮಧ್ಯಂತರ ಅಧ್ಯಕ್ಷೆ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಉಜ್ಬೇಕ್‌ಗಳು ಮತ್ತು ಇಲ್ಲಿನ ಮೂಲನಿವಾಸಿಗಳಾದ ಕಿರ್ಗಿಸ್ ಜನಾಂಗೀಯರ ನಡುವೆ ಘರ್ಷಣೆಗಳು ನಡೆದಿದ್ದವು. ಈ ಹಿಂದೆ ಸರಕಾರಿ ಹೇಳಿಕೆಗಳು ಸಾವನ್ನಪ್ಪಿದವರ ಸಂಖ್ಯೆಯನ್ನು 200ರೊಳಗೆ ಇಟ್ಟಿದ್ದವು. ಆದರೆ ಇದೀಗ ಅಧ್ಯಕ್ಷೆ ಸಾವನ್ನಪ್ಪಿದವರ ಸಂಖ್ಯೆ 2,000ಕ್ಕೆ ಏರಿಸಿ ಹೇಳಿಕೆ ನೀಡಿದ್ದಾರೆ.
ಕಿರ್ಗಿಸ್ತಾನದ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ಜೂನ್ 9ರಿಂದ 10ರ ನಡುವೆ ಭಾರೀ ಹಿಂಸಾಚಾರಗಳು ನಡೆದಿದ್ದವು. ಇದರಿಂದ ಸರಕಾರ ಅಪಾರ ನಷ್ಟ ಅನುಭವಿಸಿತ್ತು. ಇದಕ್ಕೂ ಮೊದಲು ಅಧ್ಯಕ್ಷ ಕುರ್ಮಾನ್‌ಬೆಕ್ ಬಕೆಯೇವ್ ರಾಜೀನಾಮೆ ನೀಡಿದ್ದರು. ಜನಾಂಗೀಯ ಹಿಂಸಾಚಾರದ ಜತೆಗೆ ಬಕೆಯೇವ್ ಸರಕಾರದ ಆರ್ಥಿಕ ನೀತಿಗಳು ಕೂಡ ಜನತೆಯನ್ನು ಕೆರಳಿಸಿದ್ದವು.
ಈ ವರ್ಷ ಸದಾ ಹಿಂಸಾಚಾರದಿಂದಲೇ ನಲುಗುತ್ತಿರುವ ಕಿರ್ಗಿಸ್ತಾನದ ಅಧ್ಯಕ್ಷ ಬಕೆಯೇವ್ ರಾಜಧಾನಿಯಿಂದ ಪರಾರಿಯಾಗಿದ ನಂತರ ರೋಜಾ ಒಟುಂಬಯೇವಾ ನೇತೃತ್ವದ ಮಧ್ಯಂತರ ಸರಕಾರವನ್ನು ವಿರೋಧ ಪಕ್ಷಗಳು ಅಸ್ತಿತ್ವಕ್ಕೆ ತಂದಿದ್ದವು. ಅವರೀಗ ಹಿಂಸಾಚಾರ ಪೀಡಿತವಾಗಿದ್ದ ಸ್ಥಳಗಳಿಗೆ ಭೇಟಿ ನೀಡಿ, ಅನಾಹುತದ ಅಂದಾಜು ನಡೆಸಿದ್ದಾರೆ.
ಗಲಭೆಗಳಲ್ಲಿ ಸಾವನ್ನಪ್ಪಿದವರ ಅಧಿಕೃತ ಸಂಖ್ಯೆಯನ್ನು ನಾನು ಹತ್ತು ಪಟ್ಟುಗಳಷ್ಟು ಹೆಚ್ಚಳ ಮಾಡುತ್ತಿದ್ದೇನೆ ಎಂದು ರೋಜಾ ಭೇಟಿಯ ನಂತರ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಅವರ ವಕ್ತಾರ ಫರೀದ್ ನಿಯಾಜೋವ್ ಕೂಡ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಸೂರ್ಯಾಸ್ತದೊಳಗೆ ಸತ್ತವರನ್ನು ಹೂಳಬೇಕಾಗಿರುವುದರಿಂದ ಪ್ರಸಕ್ತ ಅಂಕಿ-ಅಂಶಗಳು ಪರಿಪೂರ್ಣವಲ್ಲ ಎಂದಿದ್ದಾರೆ.