ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಸಹೋದರ, ಪಂಜಾಬ್ ಮುಖ್ಯಮಂತ್ರಿಯಾಗಿರುವ ಶಾಬಾಜ್ ಷರೀಫ್ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಎರಡು ಅರ್ಜಿಯನ್ನು ಪಾಕಿಸ್ತಾನ ಕೋರ್ಟ್ ವಜಾಗೊಳಿಸಿದೆ.
ನವಾಜ್ ಷರೀಫ್ ಅವರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಈಗಾಗಲೇ ತಡೆಹಿಡಿಯಲಾಗಿದೆ. ಆ ನಿಟ್ಟಿನಲ್ಲಿ ಷರೀಫ್ ವಿರುದ್ಧ ಸಲ್ಲಿಸಿರುವ ಅರ್ಜಿ ಸಮಂಜಸವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಷರೀಫ್ ಹಾಗೂ ಶಾಬಾಜ್ ವಿರುದ್ಧ ಫ್ರೀಲ್ಯಾನ್ಸ್ ಪತ್ರಕರ್ತ ಶಾಹಿದ್ ಓರ್ಕಾಜೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಷರೀಫ್ ಸಹೋದರರ ವಿರುದ್ಧ ಲಾಹೋರ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳುವಂತೆ ಅಪೆಕ್ಸ್ ಕೋರ್ಟ್ ಸೂಚನೆ ನೀಡಿತ್ತು. ಆ ನಿಟ್ಟಿನಲ್ಲಿ ಹೈಕೋರ್ಟ್ ಶಾಹಿದ್ ಕೋರ್ಟ್‌ಗೆ ಹಾಜರಾಗುವಂತೆ ಆದೇಶ ನೀಡಿತ್ತು. ಆದರೆ ಆತ ಕೋರ್ಟ್‌ಗೆ ಹಾಜರಾಗಿಲ್ಲದ ಕಾರಣ, ಅರ್ಜಿಯನ್ನು ವಜಾಗೊಳಿಸಿದೆ.