ಬಾಲಿವುಡ್ ತಾರೆ ಮನೀಷಾ ಕೊಯಿರಾಲಾ ಮದುವೆ ಕಾರ್ಯಕ್ರಮ ಇಂದು ಆರಂಭವಾಗಿದ್ದು, ಮೂರು ದಿನಗಳ ಕಾಲ ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ. ಸಾಮ್ರಾಟ್ ದಹಾಲ್ ಎಂಬವರೇ ನಟಿಯನ್ನು ಮದುವೆಯಾಗುತ್ತಿರುವ ವರ.
40ರ ಹರೆಯದ ನಟಿ ತನಗಿಂತ ಏಳು ವರ್ಷ ಕಿರಿಯನಾದ ನೇಪಾಳಿ ಉದ್ಯಮಿಯನ್ನು ವರಿಸುತ್ತಿದ್ದು, ಕಾರ್ಯಕ್ರಮಕ್ಕೆ ಮಾಜಿ ದೊರೆ ಜ್ಞಾನೇಂದ್ರ, ಅವರ ವೈರಿಯೆಂದೇ ಗುರುತಿಸಿಕೊಳ್ಳುತ್ತಿರುವ ಮಾವೋವಾದಿ ಮುಖಂಡ ಪುಷ್ಪ ಕಮಾಲ್ ದಹಾಲ್ ಪ್ರಚಂಡ ಮತ್ತು ಅಧ್ಯಕ್ಷ ರಾಮ್ ಬರಾನ್ ಯಾದವ್ ಮುಂತಾದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.
ಮದುವೆ ಸಮಾರಂಭಕ್ಕೆ ಮಾಧ್ಯಮಗಳಿಗೆ ಮುಕ್ತ ಪ್ರವೇಶವಿಲ್ಲ. ಆಯ್ದ ಕೆಲವು ಮಾಧ್ಯಮ ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ಒಟ್ಟಾರೆ 150 ಅತಿಥಿಗಳು ಮತ್ತು ಕುಟುಂಬದ ಸದಸ್ಯರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರಧಾನಿ ಮಾಧವ್ ಕುಮಾರ್ ನೇಪಾಳ್, ಜ್ಞಾನೇಂದ್ರ ಪತ್ನಿ ಕೋಮಲ್ ಶಾಹ್, ಬಾಲಿವುಡ್ ನಟ ಗೋವಿಂದ ಮುಂತಾದವರು ಕೂಡ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ನೇಪಾಳದ ಮೊದಲ ಚುನಾಯಿತ ಪ್ರಧಾನ ಮಂತ್ರಿ ಬಿ.ಬಿ. ಕೊಯಿರಾಲಾರ ಮೊಮ್ಮಗಳಾಗಿರುವ ಮನೀಷ್ ಮತ್ತು ದಹಾಲ್ ವಿವಾಹವು ರಾಜಧಾನಿಯಿಂದ 10 ಕಿಲೋ ಮೀಟರ್ ಪೂರ್ವಕ್ಕಿರುವ ಐಷಾರಾಮಿ ಗೋಕರ್ಣ ಫಾರೆಸ್ಟ್ ರೆಸಾರ್ಟ್‌ನಲ್ಲಿನ 'ಸ್ವಯಂವರ'ದಲ್ಲಿ ನಡೆಯುತ್ತದೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಅಮೆರಿಕಾದಲ್ಲಿ ಮೈಕ್ರೋಬಯಾಲಜಿ ಸ್ನಾತಕೋತ್ತರ ಪದವಿ ಮುಗಿಸಿರುವ ದಹಾಲ್, ಕಾಠ್ಮಂಡುವಿನ ಉದ್ಯಮಿ ಕುಟುಂಬಕ್ಕೆ ಸೇರಿದವರು. ಕಳೆದ ಹಲವು ಸಮಯದಿಂದ ಕೊಯಿರಾಲಾ ಇವರನ್ನು ಮದುವೆಯಾಗುತ್ತಿದ್ದಾರೆ ಎಂಬ ಗುಲ್ಲು ಹಬ್ಬಿತ್ತು.
ಕಾಠ್ಮಂಡುವಿನ ಹೊಟೇಲ್ ಸೌಲ್ಟೀ ಕ್ರೌನ್ ಪ್ಲಾಜಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸುಮಾರು 3,000 ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿದೆ.
ನೇಪಾಳದಲ್ಲಿನ ಆಸ್ಟ್ರೇಲಿಯಾದ ಮಾಜಿ ರಾಯಭಾರಿ ಕ್ರಿಸ್ಪಿನ್ ಕೊನ್ರಾಯ್ ಅವರ ಜತೆ 2001ರಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕೊಯಿರಾಲಾ ನಂತರ ಅದನ್ನು ಮುರಿದುಕೊಂಡಿದ್ದರು. ಬಳಿಕ ಅಮೆರಿಕಾ ಸ್ಪೀಕರ್ ಹಾಗೂ ಲೇಖಕ ಕ್ರಿಸ್ಟೋಫರ್ ಡೋರಿಸ್‌ರನ್ನು ವಿವಾಹವಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಸಂಬಂಧವೂ ಮುರಿದು ಬಿದ್ದಿತ್ತು. ಎಲ್ಲಾ ವಿವಾದಗಳಿಂದ ಮುಕ್ತವಾಗಿರುವ ಕೊಯಿರಾಲಾ ಇದೀಗ ದಹಾಲ್ ಅವರನ್ನು ಮದುವೆಯಾಗುತ್ತಿದ್ದಾರೆ.