ವಾಯುವ್ಯ ಮಯನ್ಮಾರ್‌ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯ ಪರಿಣಾಮ ನೆರೆ ಮತ್ತು ಭೂಕುಸಿತಗಳು ಸಂಭವಿಸಿದ್ದು, ಇದುವರೆಗೆ ಕನಿಷ್ಠ 57 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಭಾನುವಾರ ಆರಂಭವಾಗಿದ್ದ ಕುಂಭದ್ರೋಣ ಮಳೆ ವಾರದ ಮಧ್ಯದಲ್ಲಿ ಕೊನೆಗೊಂಡಿದ್ದರೂ ನೆರೆ ಮತ್ತು ಭೂಕುಸಿತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನೆರೆಯಿಂದಾಗಿ ಸಾಕಷ್ಟು ಮನೆಗಳು ಧ್ವಂಸಗೊಂಡಿವೆ. ಶಾಲೆಗಳು ಮತ್ತು ಸೇತುವೆಗಳು ಕೂಡ ನಾಶವಾಗಿವೆ. 2,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಬರ್ಮಾದ ಪತ್ರಿಕೆಯೊಂದು ವರದಿ ಮಾಡಿದೆ.
ನೆರೆ ನೀರು ಇಳಿಕೆಯಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾಂಕ್ರಾಮಿಕ ರೋಗಗಳು ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರೂ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಪಕ್ಕದ ರಾಷ್ಟ್ರ ಬಾಂಗ್ಲಾದೇಶದಲ್ಲೂ ಭಾರೀ ಮಳೆಯಿಂದಾಗಿ ಇದೇ ವಾರ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಮೇ ಅಂತ್ಯದಲ್ಲಿ ಸಾಮಾನ್ಯವಾಗಿ ಏಷಿಯಾದಲ್ಲಿ ಮಳೆ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ನೆರೆ, ಭೂಕುಸಿತ ಸಾಮಾನ್ಯ. ಅದರ ಜತೆ ಈ ಬಾರಿ ಚಂಡಮಾರುತಗಳು ಕೂಡ ಹಲವು ದೇಶಗಳನ್ನು ಬಾಧಿಸಿದ್ದವು.
2008ರಲ್ಲಿ ನರ್ಗಿಸ್ ಚಂಡಮಾರುತ ಬರ್ಮಾವನ್ನು ಸಾಕಷ್ಟು ಹೈರಣಾಗಿಸಿತ್ತು. ಈ ಸಂದರ್ಭದಲ್ಲಿ 1,40,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.