ಕ್ಷುಲ್ಲಕ ಕಾರಣಕ್ಕಾಗಿ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ತಾಳಿದ ಪರಿಣಾಮ ಕುವೈಟ್ ರಾಜನನ್ನು ಚಿಕ್ಕಪ್ಪನೇ ಗುಂಡು ಹೊಡೆದು ಹತ್ಯೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.
ಗುರುವಾರ ರಾತ್ರಿ ಶೇಕ್ ಬಾಸೆಲ್ ಸಲೇಮ್ ಸಾಬಾ ಅಲ್ ಸಲೇಮ್ ಅಲ್ ಸಾಬಾ (52) ಅವರನ್ನು ಹಲವು ಬಾರಿ ಗುಂಡಿಕ್ಕಲಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆಯೇ ರಾಜ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಅಲ್ ಸಾಬಾ ಚಿಕ್ಕಪ್ಪ ರಾಜನ ಜೊತೆ ಖಾಸಗಿಯಾಗಿ ಮಾತನಾಡಲು ಇದೆ ಎಂದು ಅವರನ್ನು ಭೇಟಿಯಾಗಿದ್ದರು. ನಂತರ ಅವರಿಬ್ಬರು ಮನೆಯಿಂದ ಸ್ವಲ್ಪ ದೂರ ಹೊರಹೋಗಿದ್ದರು. ತದನಂತರ ಗುಂಡಿನ ಶಬ್ದ ಕೇಳಿಸಿತ್ತು ಎಂದು ಮಾಧ್ಯಮದ ವರದಿ ಹೇಳಿದೆ.
ರಾಜನಿಗೆ ಅತಿ ಸಮೀಪದಿಂದ ಹಲವು ಬಾರಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ರಾಜನ ಚಿಕ್ಕಪ್ಪನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಶೇಕ್ ಬಾಸೆಲ್ ಕುವೈಟ್‌ನ 12ನೇ ರಾಜನಾಗಿದ್ದ ಶೇಕ್ ಸಾಬಾ ಅಲ್ ಸಲೇಮ್ ಅಲ್ ಸಾಬಾ ಅವರ ಮೊಮ್ಮನಾಗಿದ್ದಾರೆ. ಶೇಕ್ ಸಾಬಾ ಅವರು 1965ರಿಂದ 1977ರವರೆಗೆ ಕುವೈಟ್‌ನ್ನು ಆಳಿದ್ದರು.
ರಾಜನ ಹತ್ಯೆ ಇಡೀ ಕುವೈಟ್ ಜನರಿಗೆ ತೀವ್ರ ಆಘಾತ ತಂದಿರುವುದಾಗಿ ವರದಿ ವಿವರಿಸಿದ್ದು, ಶನಿವಾರ ಶೇಕ್ ಬಾಸೆಲ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಜನ ಕುಟುಂಬದ ಮೂಲಗಳು ತಿಳಿಸಿವೆ.