ಪಾಕಿಸ್ತಾನದಲ್ಲಿ ಅಮೆರಿಕಾ ಡ್ರೋನ್ ದಾಳಿ; 12 ಉಗ್ರರ ಹತ್ಯೆ
ಮಿರಾನ್ಶಾಹ್, ಶನಿವಾರ, 19 ಜೂನ್ 2010( 17:52 IST )
ಪಾಕಿಸ್ತಾನ ಉತ್ತರ ವಜಿರಿಸ್ತಾನ ಪ್ರಾಂತ್ಯದಲ್ಲಿನ ಅಫಘಾನಿಸ್ತಾನ ಗಡಿಭಾಗ ಸಮೀಪ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು, ಎರಡು ಕ್ಷಿಪಣಿ ದಾಳಿಗೆ ಕನಿಷ್ಠ 12 ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ಮತ್ತು ಅಮೆರಿಕಾ ನಡುವೆ ಆರಂಭವಾಗಿದ್ದ ಮಹತ್ವದ ಮಾತುಕತೆ ಮುಂದುವರಿಸುವ ನಿಟ್ಟಿನಲ್ಲಿ ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್ಬೂರ್ಕ್ ಇಸ್ಲಾಮಾಬಾದ್‌ಗೆ ಬಂದ ಕೆಲವೇ ಗಂಟೆಗಳಲ್ಲಿ ಈ ಕ್ಷಿಪಣಿ ದಾಳಿ ನಡೆಸಲಾಗಿದೆ.
ತಾಲಿಬಾನ್ ಮತ್ತು ಅಲ್‌ಖೈದಾ ಭಯೋತ್ಪಾದಕರ ಪ್ರಮುಖ ತಾಣ ಮತ್ತು ಈ ಪ್ರಾಂತ್ಯದ ಪ್ರಮುಖ ನಗರವಾಗಿರುವ ಮಿರಾನ್‌ಶಾಹ್‌ನಿಂದ 25 ಕಿಲೋ ಮೀಟರ್ ದೂರದಲ್ಲಿರುವ ಸೋಖೆಲೇ ಗ್ರಾಮದಲ್ಲಿನ ಉಗ್ರರ ಅಡಗುದಾಣವನ್ನು ಕೇಂದ್ರೀಕರಿಸಿ ಡ್ರೋನ್ ದಾಳಿ ನಡೆಸಲಾಗಿತ್ತು ಎಂದು ಬೇಹುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ಮತ್ತು ಅಲ್‌ಖೈದಾ ಸಂಬಂಧವನ್ನು ಹೊಂದಿದ್ದ ಕಂಪೌಂಡ್ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಕನಿಷ್ಠ 12 ಮಂದಿ ಉಗ್ರರು ಬಲಿಯಾಗಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ.
ಮತ್ತೊಬ್ಬ ಅಧಿಕಾರಿ ಘಟನೆಯನ್ನು ಮತ್ತಷ್ಟು ಖಚಿತಪಡಿಸಿದ್ದಾರೆ. ಇಲ್ಲಿನ ನಿವಾಸಿ ಮೊಹಮ್ಮದ್ ರಫೀಕ್ ಎಂಬಾತ ತಾನು 11 ಕಳೇಬರಗಳನ್ನು ನೋಡಿರುವುದಾಗಿ ತಿಳಿಸಿದ್ದಾನೆಂದು ವಿವರಣೆ ನೀಡಿದ್ದಾರೆ.
ಸಾವನ್ನಪ್ಪಿದವರು ಯಾವ ದೇಶಗಳಿಗೆ ಸೇರಿದವರು ಎಂದು ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.