ಲೈಂಗಿಕ ಕಿರುಕುಳದಿಂದ ನಮ್ಮನ್ನ ರಕ್ಷಿಸಿ: ಬಾಂಗ್ಲಾದೇಶಿಯರು
ಢಾಕಾ, ಶನಿವಾರ, 19 ಜೂನ್ 2010( 18:14 IST )
ಬಾಂಗ್ಲಾದೇಶದಲ್ಲಿ ಲೈಂಗಿಕ ಕಿರುಕುಳ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರ ವಿರೋಧ ತೀವ್ರವಾಗುತ್ತಿದ್ದು, ಸರ್ಕಾರ ಕೂಡಲೇ ಆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಢಾಕಾದಿಂದ 110 ಕಿ.ಮೀ. ದೂರದಲ್ಲಿರುವ ಸಿರಾಜ್‌ಗಂಜ್ ಜಿಲ್ಲೆಯ ತಾಲೂಪಾರಾ ಗ್ರಾಮದಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆ ಶುಕ್ರವಾರ ನಡೆದಿತ್ತು. ಅಲ್ಲದೇ ಗ್ರಾಮಸ್ಥರು ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಅಲ್ಲದೇ ಮತ್ತೊಂದು ಘಟನೆಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆಯೇ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿತ್ತು ಎಂದು ಡೈಲಿ ಸ್ಟಾರ್ ದೈನಿಕದ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ಇತ್ತೀಚೆಗೆ ಬಾಂಗ್ಲಾದಲ್ಲಿ ಲೈಂಗಿಕ ಕಿರುಕುಳ ಘಟನೆ, ಹೊಡೆದಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೂ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಆದರೂ ಲೈಂಗಿಕ ಕಿರುಕುಳದ ಘಟನೆ ಬಾಂಗ್ಲಾದೇಶಿಯರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.