ಗಾಜಾ ಪಟ್ಟಿಗೆ ರಾಫಾ ಗಡಿಯ ಮೂಲಕ ಅನಿಯಮಿತ ಅವಧಿಯವರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಅವಕಾಶ ನೀಡಿದ್ದ ಈಜಿಪ್ಟ್ ಇದೀಗ ಪಾಲಿಸ್ತೇನ್ ಭೂಪ್ರದೇಶಕ್ಕೆ ಸಹಕಾರಕ್ಕಾಗಿ ಹೋಗಲು ಅನುಮತಿ ನಿರಾಕರಿಸುತ್ತಿದೆ ಎಂದು ಇಲ್ಲಿನ ವಿರೋಧ ಪಕ್ಷದ ಸಂಸದರೊಬ್ಬರು ಆರೋಪಿಸಿದ್ದಾರೆ.
ಗಾಜಾ ಪಟ್ಟಿಯತ್ತ ಸಾಗುತ್ತಿದ್ದ ಫ್ಲೋಟಿಲ್ಲಾ ಪಡೆಯ ಮೇಲೆ ಇಸ್ರೇಲ್ ಕಮಾಂಡೋಗಳು ದಾಳಿ ಮಾಡಿ ಒಂಬತ್ತು ಮಂದಿಯನ್ನು ಕೊಂದು ಹಾಕಿದ ನಂತರ ಈಜಿಪ್ಟ್ ಜೂನ್ ಒಂದರಂದು ರಾಫಾ ಗಡಿಯ ಮೂಲಕ ಸಾಮಗ್ರಿ ಸಾಗಾಟಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಗಾಜಾ ಪಟ್ಟಿಗೆ ರಾಫಾ ಗಡಿ ಮೂಲಕ ತೆರಳಲು ಯತ್ನಿಸಿದ್ದ ಮೂರು ತಂಡಗಳಿಗೆ ಈಜಿಪ್ಟ್ ನಿಷೇಧ ಹೇರಿದ್ದು, ಅವರು ಸಾಗಿಸುತ್ತಿದ್ದ ಆಹಾರ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಈಜಿಪ್ಟ್‌ನ ಪ್ಯೂಪಲ್ಸ್ ಅಸೆಂಬ್ಲಿಯ ಮುಸ್ಲಿಂ ಬ್ರದರ್‌ಹುಡ್ ಪಾರ್ಲಿಮೆಂಟರಿ ಬ್ಲಾಕ್ ಸದಸ್ಯ ಮುಹ್ಸಿನ್ ರಾಡಿ ಆರೋಪಿಸಿದ್ದಾರೆ.
ಈ ತಂಡದೊಂದಿಗೆ ಹೋಗುವ ಸಂದರ್ಭದಲ್ಲಿ ತಾವು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಿದ್ದಾಗಿ ರಾಡಿ ವಿವರಣೆ ನೀಡಿದ್ದಾರೆ. ಹಲವು ಸಲ ನಮ್ಮನ್ನು ತಡೆಯಲಾಯಿತು. ನಂತರ ತಂಡಗಳಲ್ಲಿದ್ದ ಪರಿಹಾರ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ನಮ್ಮ ಜತೆಗಿದ್ದ ಟ್ರಕ್ಕುಗಳು 50 ಟನ್ನುಗಳಿಗೂ ಹೆಚ್ಚು ಪರಿಹಾರ ಸಾಮಗ್ರಿ ಮತ್ತು ಔಷಧಿಗಳನ್ನು ಸಾಗಾಟ ಮಾಡುತ್ತಿತ್ತು ಎಂದು ಹೇಳಿದ್ದಾರೆ.
ಈ ಸಹಾಯಕ ಪಡೆಯೊಂದಿಗೆ ತೆರಳಿದವರಲ್ಲೊಬ್ಬರಾಗಿರುವ ರಾಡಿ ಪ್ರಕಾರ ಈಜಿಪ್ಟ್ ಸರಕಾರವು ಗಡಿ ತೆರವುಗೊಳಿಸಿದ್ದು ಕೇವಲ ಪ್ರಚಾರಕ್ಕಾಗಿ. ವಾಸ್ತವವಾಗಿ ಅದು ರಾಫಾ ಗಡಿಯನ್ನು ಸಾಮಗ್ರಿ ಸಾಗಾಟಕ್ಕೆ ಮುಕ್ತಗೊಳಿಸಿಲ್ಲ.