ಡೆಟ್ರಾಯಿಟ್ ಬಳಿಯ ಹೋಟೆಲೊಂದರಲ್ಲಿ ಆಂಧ್ರ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು, ಐವರು ಅಪರಿಚಿತರ ಗುಂಪು ಲೂಟಿ ಮಾಡಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ,
ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ 35 ವರ್ಷ ವಯಸ್ಸಿನ ವೆಂಕಟ್ ಸುಬ್ಬಾ ರೆಡ್ಡಿ ಕುಟ್ಟಾಮಂಚಿ ಎನ್ನುವ ವ್ಯಕ್ತಿಯನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..
ಡೆಟ್ರಾಯಿಟ್‌ನ ಸೌಥ್‌ಫಿಲ್ಡ್ ಬಳಿಯಿರುವ ಹೋಟೆಲ್‌ಗೆ ಬೆಳಗಿನ ಜಾವ 2 ಗಂಟೆಗೆ ಮೆಕ್ಸಿಕೊ ಮೂಲದ ಮಹಿಳೆಯೊಬ್ಬಳನ್ನು ಭೇಟಿ ಮಾಡಲು ವೆಂಕಟ್ ಸುಬ್ಬಾರೆಡ್ಡಿ ತೆರಳುತ್ತಿರುವ ಸಂದರ್ಭದಲ್ಲಿ ಐವರು ಅಪರಿಚಿತರ ಗುಂಪು ದಾಳಿ ಮಾಡಿ ಹತ್ಯೆಗೈದಿದೆ ಎಂದು ಉತ್ತರ ಅಮೆರಿಕ ತೆಲಗು ಅಸೋಸಿಯೇಶನ್ ತಿಳಿಸಿದೆ.
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಮಹಿಳೆಯ ಪ್ರಿಯಕರು ಸೇರಿದ್ದಾನೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ವೆಂಕಟ್ ರೆಡ್ಡಿ, 23 ವರ್ಷ ವಯಸ್ಸಿನ ಮೆಕ್ಸಿಕೊ ಮಹಿಳೆಯನ್ನು ಇಂಟರ್‌ನೆಟ್ ಡೇಟಿಂಗ್ ಮೂಲಕ ಪರಿಚಯವಾಗಿದ್ದು, ರಾತ್ರಿ ಉಟಕ್ಕೆ ಅಹ್ವಾನಿಸಿದ್ದರು.. ಭೋಜನದ ನಂತರ ರಾತ್ರಿ 2ಗಂಟೆಗೆ ಹೋಟೆಲ್ ತೆರಳುತ್ತಿರುವ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆ.
ಮಹಿಳೆಯ ಬಾಯ್‌ಫ್ರೆಂಡ್ ಮತ್ತು ಇತರ ನಾಲ್ವರು ಆರೋಪಿಗಳು ಹೋಟೆಲ್ ಮುಂಬಾಗದಲ್ಲಿ ನಿರೀಕ್ಷಿಸುತ್ತಿದ್ದು, ವೆಂಕಟ್‌ರೆಡ್ಡಿ ಹೋಟೆಲ್ ಬಳಿಗೆ ಬರುತ್ತಿದ್ದಂತೆ ಆರೋಪಿಗಳು ದಾಳಿ ನಡೆಸಿ ನಗದು ದೋಚಿ ನಂತರ ಗುಂಡಿನ ಸುರಿಮಳೆಗೈದರು ಎಂದು ನಾರ್ಥ್ ಅಮೆರಿಕಾದ ತೆಲಗು ಅಸೋಸಿಯೇಶನ್ ಉಪಾಧ್ಯಕ್ಷ ಪ್ರಸಾದ್ ಥೋಟಾಕುರಾ ಹೇಳಿದ್ದಾರೆ.