ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹಾವಿನಂತೆ ಎಂದು ಕಿಡಿಕಾರಿರುವ ಅಲ್ ಖಾಯಿದಾ ವಕ್ತಾರ, ಬರಾಕ್ ವಿಶ್ವಾಸಘಾತುಕ, ರಕ್ತದಾಹ ಹಾಗೂ ವಿಶಾಲದೃಷ್ಟಿಕೋನ ಇಲ್ಲದ ಅಮೆರಿಕದ ಅಧ್ಯಕ್ಷ ಎಂದು ಇಸ್ಲಾಮಿಷ್ಟ್ ವೆಬ್ ಸೈಟ್‌ನಲ್ಲಿ ಹೊಸದಾಗಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ವಾಗ್ದಾಳಿ ನಡೆಸಲಾಗಿದೆ.
ಭಾನುವಾರ ಪೋಸ್ಟ್ ಮಾಡಿರುವ ನೂತನ ವೀಡಿಯೋದಲ್ಲಿ, ಅಮೆರಿಕ ಮೂಲದ ಅಲ್ ಖಾಯಿದಾ ವಕ್ತಾರ ಆಡಂ ಗಾಡಾನ್, ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾನೆ. ಅಮೆರಿಕ ಅನಾವಶ್ಯಕವಾಗಿ ಅಫ್ಘಾನಿಸ್ತಾನ, ಪಾಕಿಸ್ತಾನ, ಯೆಮೆನ್, ಸೋಮಾಲಿಯಾದಲ್ಲಿ ಮೂಗು ತೂಗಿಸುತ್ತಿರುವುದಾಗಿ ಹರಿಹಾಯ್ದಿರುವುದಾಗಿ ಅಮೆರಕನ್ ನ್ಯೂಸ್ ಚಾನೆಲ್ ವರದಿ ತಿಳಿಸಿದೆ.
ಅರೆಬಿಕ್ ಸಬ್ ಟೈಟಲ್‌ನಲ್ಲಿರುವ ವಿಡಿಯೋದಲ್ಲಿ ಗಾಡಾನ್ ಇಂಗ್ಲಿಷ್‌ನಲ್ಲಿ ಅಮೆರಿಕದ ಧೋರಣೆ ವಿರುದ್ಧ ಕಿಡಿಕಾರಿದ್ದಾನೆ. ಬರಾಕ್ ಹಾವಿನಂತೆ ವರ್ತಿಸುತ್ತಿತ್ತು. ಮುಸ್ಲಿಮರ ಮಾರಣಹೋಮ ನಡೆಸುವುದೇ ಯುದ್ಧ ಎಂದು ಅಮೆರಿಕ ಭಾವಿಸಿದೆ ಎಂದು 24 ನಿಮಿಷಗಳ ಕಾಲದ ವೀಡಿಯೋದಲ್ಲಿ ಆರೋಪಿಸಿದ್ದಾನೆ.
ಆ ನಿಟ್ಟಿನಲ್ಲಿ ಅಮೆರಿಕದ ಮೇಲೆ ಹೊಸ ದಾಳಿ ನಡೆಸುವುದಾಗಿಯೂ ವಿಡಿಯೋದಲ್ಲಿ ಗಂಭೀರವಾಗಿ ಎಚ್ಚರಿಸಿದ್ದಾನೆ. ಅಲ್ ಖಾಯಿದಾ ವಕ್ತಾರ ಗಾಡಾನ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಮಿಲಿಯನ್ ಯುಎಸ್ ಡಾಲರ್ ನೀಡುವುದಾಗಿ ಅಮೆರಿಕ ಈಗಾಗಲೇ ಘೋಷಿಸಿದೆ.