ಸುಮಾರು 3,500 ವರ್ಷಗಳಷ್ಟು ಪುರಾತನವಾದ ನಗರವೊಂದನ್ನು ಭೂಗರ್ಭಶಾಸ್ತ್ರಜ್ಞರು ಈಜಿಪ್ಟ್‌ನ ವಾಯುವ್ಯ ಪ್ರದೇಶದ ನಿಲೆ ಡೆಲ್ಟಾದಲ್ಲಿ ಪತ್ತೆ ಹಚ್ಚಿರುವುದಾಗಿ ವರದಿಯೊಂದು ತಿಳಿಸಿದೆ.
ನೆಲದೊಳಗೆ ಹೂತು ಹೋಗಿದ್ದ ಈ ಪುರಾತನ ನಗರವನ್ನು ಆಸ್ಟ್ರೀಯಾದ ಭೂಗರ್ಭಶಾಸ್ತ್ರಜ್ಞರ ತಂಡ ಪತ್ತೆ ಹಚ್ಚಿದೆ.ಕ್ರಿ.ಪೂ. 1664ರಿಂದ 1569ರವರೆಗೆ ಈಜಿಪ್ಟ್‌ನ್ನು ಆಳಿದ್ದ ಹೈಕ್ಸೊಸ್ ಆಡಳಿತಗಾರರ ಕಾಲದಲ್ಲಿ ಇದು ಕೇಂದ್ರ ನಗರವಾಗಿತ್ತು ಎಂದು ಈಜಿಪ್ಟ್ ಸಾಂಸ್ಕೃತಿಕ ಸಚಿವ ಫಾರೂಕ್ ಹೊನ್ಸಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಕ್ಸಿನ್‌ಹುವಾ ವರದಿ ವಿವರಿಸಿದೆ.
ಈಜಿಪ್ಟ್‌ನ ಪ್ರಮುಖ ಭೂಗರ್ಭಶಾಸ್ತ್ರಜ್ಞ ಮತ್ತು ಸುಪ್ರೀಂ ಕೌನ್ಸಿಲ್ ಆಫ್ ಆಂಟಿಕ್ವಿಟಿಸ್(ಎಸ್‌ಸಿಎ)ನ ಪ್ರಧಾನ ಕಾರ್ಯದರ್ಶಿಯಾಗಿರುವ ಝಾಹಿ ಹಾವಾಸ್, ಭೂಗತವಾಗಿರುವ ಈ ನಗರದ ಗಡಿರೇಖೆಗಳು, ಮನೆಗಳು ಹಾಗೂ ದೇವಾಲಯಗಳ ಚಿತ್ರವನ್ನು ರಾಡಾರ್‌ನಲ್ಲಿ ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಇಡೀ ಪಟ್ಟಣವನ್ನು ನಗರೀಕರಣ ಮಾಡಿದ ಯೋಜನೆಯ ಚಿತ್ರಣ ಮತ್ತು ಮುಳುಗಡೆಯಾಗಿರುವ ಎರಡು ದ್ವೀಪ ಪ್ರದೇಶದಲ್ಲಿನ ಬಂದರು, ಕೆಲವು ವಿಧದ ಬಾವಿಗಳನ್ನು ಕೂಡ ಪತ್ತೆ ಹಚ್ಚಲಾಗಿದೆ ಎಂದು ಆಸ್ಟ್ರೀಯನ್ ತಂಡದ ಮುಖ್ಯಸ್ಥ ಇರ್ನೆ ಮುಲ್ಲೆರ್ ಹೇಳಿದ್ದಾರೆ.