ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ ಸೆಣಸಾಟವನ್ನು ವೀಕ್ಷಿಸುತ್ತಿದ್ದ ಜನ ಸಮೂಹದ ಮೇಲೆ ಭಯೋತ್ಪಾದಕರು ನಡೆಸಿದ ಎರಡು ಬಾಂಬ್ ದಾಳಿಯಲ್ಲಿ ಸುಮಾರು 64 ಜನರು ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಉಗಾಂಡ ರಾಜಧಾನಿಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ರಗ್ಬೆ ಕ್ಲಬ್‌ನಲ್ಲಿ ಸ್ಪೇನ್ ಮತ್ತು ಹಾಲೆಂಡ್ ನಡುವಿನ ವಿಶ್ವಕಪ್ ಫುಟ್ಬಾಲ್ ಸಮರ ವೀಕ್ಷಿಸಲು ಜನರು ನೆರೆದಿದ್ದವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಮತ್ತೊಂದು ಬಾಂಬ್ ದಾಳಿ ಇಥಿಯೋಪಿಯಾ ರೆಸ್ಟೋರೆಂಟ್‌ವೊಂದರ ಮೇಲೆ ನಡೆದಿದ್ದು, ಇದರಲ್ಲಿ ಮೂರು ಅಮೆರಿಕನ ಪ್ರಜೆಗಳು ಗಾಯಗೊಂಡಿದ್ದಾರೆ. ರಗ್ಬಿ ಕ್ಲಬ್ ದಾಳಿಯಲ್ಲಿ ಅಮೆರಿಕನ್ ಪ್ರಜೆ ಸೇರಿದಂತೆ 64ಜನರು ಬಲಿಯಾಗಿರುವುದಾಗಿ ಕಂಪಾಲಾದಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿ ವಕ್ತಾರ ವಿವರಿಸಿದ್ದಾರೆ.
ಬಾಂಬ್ ದಾಳಿಯ ಹಿಂದೆ ಸೋಮಾಲಿಯಾದ ಅಲ್ ಶಾಬಾಬ್ ಉಗ್ರಗಾಮಿ ಸಂಘಟನೆಯ ಕೈವಾಡ ಇದ್ದಿರುವುದಾಗಿ ಕಂಪಾಲಾ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ ಶಾಬಾಬ್ ಸಂಘಟನೆ ಅಲ್ ಖಾಯಿದಾ ಜೊತೆ ಸಂಪರ್ಕ ಹೊಂದಿರುವುದಾಗಿಯೂ ಹೇಳಿದ್ದಾರೆ. ಬಾಂಬ್ ಸ್ಫೋಟಕ್ಕೆ ರಗ್ಬಿ ಕ್ಲಬ್‌ನಲ್ಲಿ ಜನರ ತಲೆ ಮತ್ತು ಕಾಲುಗಳು ಛಿದ್ರವಾಗಿ ಬಿದ್ದ ದೃಶ್ಯಗಳು ಭಯ ಹುಟ್ಟಿಸುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಗ್ಬಿ ಕ್ಲಬ್ ಸ್ಫೋಟದಲ್ಲಿ 49 ಜನರು ಹಾಗೂ ಇಥಿಯೋಪಿಯನ್ ರೆಸ್ಟೋರೆಂಟ್‌ನಲ್ಲಿ 15 ಮಂದಿ ಸಾವನ್ನಪ್ಪಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.