ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಖಾಯಿದಾ ಸಂಪರ್ಕ ಹೊಂದಿದ್ದ ಹಕ್ಕಾನಿ ಉಗ್ರಗಾಮಿಗಳನ್ನು ಮೊದಲು ಮಟ್ಟಹಾಕಿ ಎಂದು ಅಮೆರಿಕ ಸೆನೆಟ್‌ನ ಆರ್ಮ್ಸ್ ಸರ್ವಿಸ್ ಕಮಿಟಿಯ ಅಧ್ಯಕ್ಷರು ಪಾಕಿಸ್ತಾನಕ್ಕೆ ಒತ್ತಾಯಿಸಿದ್ದಾರೆ.
ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವ ಸೆನೆಟರ್ ಕಾರ್ಲ್ ಲೆವಿನ್ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಹಕ್ಕಾನಿ ಉಗ್ರಗಾಮಿಗಳು ಯಾವುದೇ ಶಾಂತಿ ಮಾತುಕತೆಯ ಹಾದಿಯನ್ನು ತುಳಿಯುವುದಿಲ್ಲ. ಹಾಗಾಗಿ ಹಕ್ಕಾನಿ ಉಗ್ರಗಾಮಿ ಸಂಘಟನೆಯನ್ನೂ ಕೂಡ ಅಮೆರಿಕದ ಉಗ್ರಗಾಮಿಗಳ ಪಟ್ಟಿಗೆ ಸೇರಿಸಲು ಪಾಕ್ ಮುಂದಾಗಬೇಕೆಂದು ಹೇಳಿದರು.
ಪಾಕಿಸ್ತಾನ ಉಳಿದ ಉಗ್ರಗಾಮಿ ಸಂಘಟನೆಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಆದರೆ ಅಷ್ಟಕ್ಕೆ ಅದು ಮುಗಿಯುವುದಿಲ್ಲ, ಪಾಕಿಸ್ತಾನ ಎಲ್ಲಾ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕುವ ಶಪಥ ಮಾಡಬೇಕು ಎಂದರು.
ಹಕ್ಕಾನಿಯ ಸಂಘಟನೆ ಅಫ್ಘಾನಿಸ್ತಾನವನ್ನು ಮುಖ್ಯ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ. ಅಲ್ಲದೇ ಶಂಕಿತ ಉಗ್ರರು ಪಾಕಿಸ್ತಾನದ ಪ್ರಭಾವಿ ಐಎಸ್ಐ ಜೊತೆ ನಿಕಟ ಸಂಪರ್ಕ ಹೊಂದಿರುವುದಾಗಿಯೂ ಈ ಸಂದರ್ಭದಲ್ಲಿ ದೂರಿದರು.