ಹೀಗೆಂದು ಕರೆ ನೀಡಿರುವುದು ಅಲ್‌ಖೈದಾ. ಇಸ್ಲಾಂ ವಿರೋಧಿಗಳ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ಜಿಹಾದಿಗಳ ವಿಧವಾ ಪತ್ನಿಯರನ್ನು ನೀವು ಮದುವೆಯಾಗಬೇಕು ಎಂದು ತನ್ನ ಕಾರ್ಯಕರ್ತರಿಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಫತ್ವಾ ಹೊರಡಿಸಿದೆ.
ಇರಾಕ್‌ನ ಅಲ್‌ಖೈದಾ ಈ ಫತ್ವಾ ಹೊರಡಿಸಿದೆ. ಸಾರ್ವಜನಿಕವಾಗಿ ಈ ಕರೆಯನ್ನು ನೀಡಿರುವುದರಿಂದ ಭಾರೀ ಸುದ್ದಿಯೂ ಆಗುತ್ತಿದೆಯಂತೆ. ಪರಿಣಾಮ ಬಾಗ್ದಾದ್ ಪೂರ್ವದಲ್ಲಿರುವ ದಿಯಾಲಾ ಪ್ರಾಂತ್ಯದಲ್ಲಿ ಕೇವಲ ಮೂರೇ ವಾರಗಳಲ್ಲಿ 70ಕ್ಕೂ ಹೆಚ್ಚು ಮದುವೆಗಳು ನಡೆದು ಹೋಗಿವೆ.
ಮೆಸೊಪೊಟೇಮಿಯಾ ಎಂದೇ ಕರೆಯಲ್ಪಡುವ ಇರಾಕ್‌ನಲ್ಲಿನ ಅಲ್‌ಖೈದಾ ಸದಸ್ಯರು ಈಗಾಗಲೇ ಹಲವು ವಿಧವೆಯರಿಗೆ ಬಾಳು ನೀಡಿದ್ದಾರೆ. ಸಂಘಟನೆ ಫತ್ವಾ ಹೊರಡಿಸಿರುವುದರಿಂದ ಇತರರೂ ಸಿದ್ದರಾಗುತ್ತಿದ್ದಾರೆ ಎಂದು ಅವರ ಸಂಬಂಧಿಕರೇ ಹೇಳಿಕೊಂಡಿದ್ದಾರೆ.
ಅಲ್‌ಖೈದಾವನ್ನು ಮಟ್ಟ ಹಾಕಲು ಇರಾಕ್ ಸರಕಾರ ಮತ್ತು ಅಮೆರಿಕಾ ಮಿಲಿಟರಿ ಶತಯತ್ನಗಳನ್ನು ನಡೆಸುತ್ತಿರುವುದರಿಂದ ಇಲ್ಲಿನ ಸಾಕಷ್ಟು ಜನ ಮದುವೆಗಾಗಿ ದುಂಬಾಲು ಬೀಳುತ್ತಿರುವುದು ಕಂಡು ಬರುತ್ತಿದೆ ಎಂದು ವರದಿಗಳು ಹೇಳಿವೆ.
ಸಂಘಟನೆಯ ಕೆಲವು ಸದಸ್ಯರು ತಮ್ಮ ಮೂರನೇ ಅಥವಾ ನಾಲ್ಕನೇ ಪತ್ನಿಯನ್ನಾಗಿ ವಿಧವೆಯರನ್ನು ಸ್ವೀಕರಿಸಿದ್ದಾರೆ. ಆದರೆ ಕೆಲವು ತಮ್ಮ ಮೊದಲ ಪತ್ನಿಯನ್ನಾಗಿ ಸ್ವೀಕರಿಸಿದ ಉದಾಹರಣೆಗಳೂ ಇವೆ.
ಈ ಹಿಂದೆ ದಾಳಿಕೋರರು ಮತ್ತು ಇರಾಕ್ ಸರಕಾರದ ಮಿತ್ರರನ್ನು ಕೊಲ್ಲುವುದನ್ನೇ ಕಾಯಕ ಮಾಡಿಕೊಂಡು ಮದುವೆಯನ್ನೇ ಮರೆತವರು ಕೂಡ ಇದೀಗ ಸಂಘಟನೆಯ ಕರೆಯಂತೆ ವಿಧವೆಯನ್ನು ಮದುವೆಯಾಗುತ್ತಿದ್ದಾರೆ.