ಪರಮಾಣು ಅಸ್ತ್ರವನ್ನು ಹೊಂದುವ ಸಾಮರ್ಥ್ಯದ ಅತಿ ಸನಿಹದಲ್ಲಿ ಇರಾನ್ ಇದೆ ಎಂದು ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆದೇವ್ ಹೇಳಿದ್ದು, ಇದರೊಂದಿಗೆ ಇರಾನ್‌ನ ಮಹತ್ವಾಕಾಂಕ್ಷೆಯ ಅಣು ಬಾಂಬ್ ವಿರುದ್ಧ ಮಾಸ್ಕೋ ಬಹಿರಂಗವಾಗಿ ಕಠಿಣವಾದ ಮಾತಿನ ಛಾಟಿಯೇಟು ನೀಡಿದಂತಾಗಿದೆ.
ಅಣ್ವಸ್ತ್ರ ನಿರ್ಮಾಣ ಕುರಿತು ಇರಾನ್ ಹತ್ತಿರವಾಗುತ್ತಿದ್ದು, ಸಾಮರ್ಥ್ಯ ಮೈಗೂಡಿಸಿಕೊಳ್ಳುತ್ತಿದೆ. ಅದು ಶೀಘ್ರದಲ್ಲೇ ಬಾಂಬ್ ತಯಾರಿಸುವ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ ಎಂದು ರಷ್ಯಾದ ರಾಯಭಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಮಿಟ್ರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇಸ್ಲಾಮಿಕ್ ರಾಷ್ಟ್ರ ಇರಾನ್‌ನ ರಾಜತಾಂತ್ರಿಕ ಮತ್ತು ಆರ್ಥಿಕ ಸಾಂಪ್ರದಾಯಿಕ ಮಿತ್ರರಾಷ್ಟ್ರವಾಗಿರುವ ರಷ್ಯಾ, ಇತರ ರಾಷ್ಟ್ರಗಳಂತೆ ಕಠಿಣ ಪದಗಳಲ್ಲಿ ಟೆಹ್ರಾನ್ ಟೀಕೆಗೆ ಹೋಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಾಸ್ಕೋ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.