ಅಬುಧಾಬಿಯಲ್ಲಿ ನಡೆದ ರಸ್ತೆ ಅಪಘಾತವೊಂದಕ್ಕೆ ಮೂವರು ಭಾರತೀಯರೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸುಮಾರು 50ರಷ್ಟು ಪ್ರಯಾಣಿಕರು ಸಾಗುತ್ತಿದ್ದ ಬಸ್ಸನ್ನು ಚಾಲಕ ದಿಢೀರ್ ಆಗಿ ತಿರುಗಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ವೇಗವಾಗಿ ಸಾಗುತ್ತಿದ್ದ ಬಸ್ಸಿನ ನಿಯಂತ್ರಣವನ್ನು ಚಾಲಕ ಕಳೆದುಕೊಂಡಿದ್ದ. ರಸ್ತೆಯಲ್ಲಿ ಮುಂದೆ ಯಾವುದೇ ತಿರುವುಗಳು ಇಲ್ಲದೇ ಇದ್ದರೂ ಆತ ವಾಹನವನ್ನು ತಿರುಗಿಸಿದ್ದ. ಹಾಗಾಗಿ ಅಪಘಾತ ಸಂಭವಿಸಿದೆ ಎಂದು ಅಬುಧಾಬಿ ಅಪಘಾತ ತನಿಖಾ ವಿಭಾಗದ ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್ ಯೂಸುಫ್ ಅಲ್ ಬಾಹ್ಲೋವಿ ತಿಳಿಸಿದ್ದಾರೆ.
ಘಟನೆಯಿಂದಾಗಿ ಸ್ಥಳದಲ್ಲೇ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಬಸ್ ಚಾಲಕ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತನಾಗಿದ್ದಾನೆ.
50ರಷ್ಟಿದ್ದ ಪ್ರಯಾಣಿಕರಲ್ಲಿ 26 ಭಾರತೀಯರು ಮತ್ತು ಒಬ್ಬ ಬಾಂಗ್ಲಾದೇಶಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾನೆ.
ಇತರರು ಸಾಮಾನ್ಯ ಗಾಯಗಳಿಗೊಳಗಾಗಿದ್ದರಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಬಸ್ಸು ಮುಸಾಫಾದಿಂದ ಅಬುಧಾಬಿಗೆ ಕಾರ್ಮಿಕರನ್ನು ಸಾಗಾಟ ಮಾಡುತ್ತಿತ್ತು. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಈ ಬಸ್ಸು ಹೋಗಬೇಕಿತ್ತು.