ಪರಮಾಣು ಸಶಕ್ತ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನಗಳು ವಿಶ್ವಾಸದ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಮಾನತುಗೊಂಡಿದ್ದ ದ್ವಿಪಕ್ಷೀಯ ಮಾತುಕತೆಗೆ ಗುರುವಾರ ಚಾಲನೆ ನೀಡಲಿವೆ.
ಈ ಮಹತ್ವದ ಮುಖಾಮುಖಿ ಸಂದರ್ಭದಲ್ಲಿ ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದಿರುವ ಉಭಯ ದೇಶಗಳ ನಡುವಿನ ಗಡಿ ವಿವಾದವಾಗಲೀ ಅಥವಾ ಭಾರತಕ್ಕೆ ಆತಂಕ ಹುಟ್ಟಿಸಿರುವ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆ ಕುರಿತಾಗಲೀ ಗಹನ ಚರ್ಚೆ ನಡೆಯುವ ಸಾಧ್ಯತೆಗಳು ಕಡಿಮೆ. ಆದರೆ ವಿಶ್ವಾಸ ವೃದ್ಧಿಗೆ ಅಗತ್ಯವಿರುವ ಕ್ರಮಗಳ ಕುರಿತು ಮಾತುಕತೆ ನಡೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರು 2008ರಲ್ಲಿ ಮುಂಬೈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ನಂತರ ಚಾಲನೆಯಲ್ಲಿದ್ದ ನಾಲ್ಕು ವರ್ಷಗಳ ಮಾತುಕತೆಯನ್ನು ಭಾರತ ಸ್ಥಗಿತಗೊಳಿಸಿತ್ತು. ಆದರೆ ಇದೀಗ ನವದೆಹಲಿಯು ಮಾತುಕತೆಗೆ ಆಸಕ್ತಿ ತೋರಿಸಿದ್ದು, ಅದರಂತೆ ಗುರುವಾರ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಇಸ್ಲಾಮಾಬಾದ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದೇ ವರ್ಷದ ಏಪ್ರಿಲ್‌ನಲ್ಲಿ ಭೂತಾನ್‌ನಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು.
ಅದರಂತೆ ನಂತರದ ದಿನಗಳಲ್ಲಿ ವಿದೇಶಾಂಗ ಕಾರ್ಯದರ್ಶಿಗಳು ಎರಡೆರಡು ಸುತ್ತಿನ ಮಾತುಕತೆ ನಡೆಸಿದ್ದರೆ, ಸಾರ್ಕ್ ಶೃಂಗಸಭೆಗೆ ತೆರಳಿದ್ದ ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನದ ಸಚಿವರನ್ನು ಭೇಟಿ ಮಾಡಿದ್ದರು.
ಗುರುವಾರದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳ ಸಂಬಂಧಗಳ ಕುರಿತ ಎಲ್ಲಾ ವಿಚಾರಗಳನ್ನೂ ಕೃಷ್ಣ ಮತ್ತು ಖುರೇಷಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿ ಮಾತುಕತೆಗೆ ಯಾವುದೇ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಲ್ಲ. ಎಲ್ಲಾ ವಿಚಾರಗಳೂ ನಮ್ಮೆದುರಿಗಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಭಾರತ ಮತ್ತು ಪಾಕಿಸ್ತಾನಗಳು ಯಾವ ವಿಚಾರಗಳಿಗೆ ಆದ್ಯತೆ ನೀಡಬೇಕೆಂಬ ಕುರಿತೇ ತೀವ್ರ ಗೊಂದಲದಲ್ಲಿವೆ. ಭಾರತವು ಪಾಕಿಸ್ತಾನ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆಗೆ ಮೊದಲ ಆದ್ಯತೆ ನೀಡುತ್ತಿದ್ದರೆ, ಪಾಕಿಸ್ತಾನವು ಕಾಶ್ಮೀರ ಸೇರಿದಂತೆ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲು ಮುಂದೆ ಬರುತ್ತಿದೆ.
ಆದರೂ ಉಭಯ ರಾಷ್ಟ್ರಗಳು ಮಾತುಕತೆಗೆ ಮುಂದಾಗುತ್ತಿರುವುದು ಧನಾತ್ಮಕ ಬೆಳವಣಿಗೆ. ಎಲ್ಲಾ ವಿಚಾರಗಳ ಕುರಿತು ಸೌಜನ್ಯಯುತ ನಿಲುವನ್ನು ಮುಂದುವರಿಸುವುದು ಅಗತ್ಯ ಎಂದು ರಮೇಶ್ ಛೋಪ್ರಾ ಎಂಬ ತಜ್ಞರು ಕಿವಿ ಮಾತು ಹೇಳಿದ್ದಾರೆ.