ಮುಂಬೈ ಭಯೋತ್ಪಾದನಾ ದಾಳಿ ಸಂಚಿನಲ್ಲಿ ಭಾಗಿಯಾಗಿರುವ ಶಂಕಿತ ಏಳು ಮಂದಿ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್, ಲಷ್ಕರ್ ಇ ತೊಯ್ಬಾ ಕಮಾಂಡರ್ ಜಾಕಿ ಉರ್ ರೆಹಮಾನ್ ಜಾಮೀನು ಅರ್ಜಿ ಕುರಿತಂತೆ ಜುಲೈ 17ರೊಳಗೆ ಉತ್ತರ ನೀಡುವಂತೆ ಪಾಕ್ ಸರಕಾರಕ್ಕೆ ಸೂಚಿಸಿದೆ.
ಜುಲೈ 10ರಂದು ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನಿಷೇಧಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ವರಿಷ್ಠ ಲಖ್ವಿ ಜಾಮೀನು ನೀಡುವಂತೆ ಕೋರಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆ ನಿಟ್ಟಿನಲ್ಲಿ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಅವರು ಮಂಗಳವಾರ ಲಖ್ವಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡರು.
ಅಲ್ಲದೇ, ಲಖ್ವಿ ಜಾಮೀನು ಅರ್ಜಿ ಕುರಿತಂತೆ ಪಾಕ್ ಸರಕಾರ ಜುಲೈ 17ರೊಳಗೆ ಸೂಕ್ತ ಉತ್ತರ ನೀಡಬೇಕೆಂದು ನ್ಯಾಯಾಧೀಶರು ನಿರ್ದೇಶನ ನೀಡಿದರು.
ಮುಂಬೈ ದಾಳಿ ವಿಚಾರಣೆ ನಿಧಾನಗತಿಯಲ್ಲಿ ನಡೆಯುತ್ತಿರುವುದಾಗಿ ಆರೋಪಿಸಿರುವ ಲಖ್ವಿ ಪರ ವಕೀಲ ಖ್ವಾಜಾ ಸುಲ್ತಾನ್, ಆ ನಿಟ್ಟಿನಲ್ಲಿ ಲಖ್ವಿಗೆ ಜಾಮೀನು ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.