ಹಲವು ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫೀಡೆಲ್ ಕ್ಯಾಸ್ಟ್ರೋ ಸೋಮವಾರ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದು, ಇರಾನ್ ಜತೆಗಿನ ಪಾಶ್ಚಾತ್ಯ ರಾಷ್ಟ್ರಗಳ ಮುಖಾಮುಖಿಯಿಂದಾಗಿ ಪರಮಾಣು ಯುದ್ಧ ಸಂಭವಿಸಬಹುದು ಎಂದು ವಿಶ್ವಕ್ಕೆ ಎಚ್ಚರಿಕೆ ನೀಡಿದ್ದಾರೆ.
83ರ ಹರೆಯದ ಗಡ್ಡಧಾರಿ ಕ್ಯಾಸ್ಟ್ರೋ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಂದರ್ಶನಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಚಿಕ್ಕ ಡೆಸ್ಕ್ ಒಂದರಲ್ಲಿ ಕಡು ಬಣ್ಣದ ದಿರಿಸಿನೊಂದಿಗೆ ತನ್ನ ಈ ಹಿಂದಿನ ಅಮೆರಿಕಾ ವಿರೋಧಿ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬಂತೆ ಕಾಣಿಸಿಕೊಂಡಿದ್ದಾರೆ.
ಇರಾನ್‌ನ ಪರಮಾಣು ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಸ್ರೇಲ್ ಜತೆ ಸೇರಿ ಅಮೆರಿಕಾ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೇರಲು ಮುಂದಾದಲ್ಲಿ ಅಣು ಯುದ್ಧ ನಡೆಯಬಹುದು. ಯುದ್ಧವೆಂದರೆ ಅಲ್ಲಿ ಖಂಡಿತಾ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಾಗಬಹುದು. ಇದು ಬೆಂಕಿಯ ಜತೆಗಿನ ಆಟವಾಗಿರುತ್ತದೆ ಎಂಬುದು ಮಾತ್ರ ಸತ್ಯ ಎಂದು ಕ್ಯಾಸ್ಟ್ರೋ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಇತರ ಎಲ್ಲಾ ರಾಷ್ಟ್ರಗಳು ಒಟ್ಟು ರಕ್ಷಣೆಗಾಗಿ ವ್ಯಯ ಮಾಡುವ ಮೊತ್ತಕ್ಕಿಂತ ಅಮೆರಿಕಾದ ರಕ್ಷಣಾ ವೆಚ್ಚವು ಹೆಚ್ಚಾಗಿರುತ್ತದೆ ಎಂಬುದು ಸಂಶಯಾತೀತ ಎಂದೂ ಅವರು ಹೇಳಿದ್ದಾರೆ.
2006ರ ಜುಲೈ ತಿಂಗಳಲ್ಲಿ ಕರುಳಿನ ತುರ್ತು ಶಸ್ತ್ರಚಿಕಿತ್ಸೆಗೊಳಗುವ ಹೊತ್ತಿನಲ್ಲಿ ತನ್ನ ಕಿರಿಯ ಸಹೋದರ ರೌಲ್ ಕ್ಯಾಸ್ಟ್ರೋ ಅವರಿಗೆ ಫೀಡೆಲ್ ಕ್ಯಾಸ್ಟ್ರೋ ಅಧಿಕಾರ ಹಸ್ತಾಂತರಿಸಿದ್ದರು. ಬಳಿಕ ಯಾವುದೇ ವೀಡಿಯೋದಲ್ಲಿ ಅವರು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. 2008ರಲ್ಲಿ ಅವರು ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅದೇ ಹೊತ್ತಿಗೆ ತಾನು ಪರಮಾಣು ಯುದ್ಧದ ಭೀತಿ ಹೊಂದಿರುವುದು ಕ್ಯಾಸ್ಟ್ರೋ ಸಂದರ್ಶನದಲ್ಲಿ ಸ್ಪಷ್ಟವಾಗಿದೆಯಾದರೂ, ಅವರು ಯಾವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.