ಮಸೀದಿಯ ಹೊರಗಿದ್ದ ನೀರನ್ನು ಕುಡಿದದ್ದನ್ನೇ ಮುಂದಿಟ್ಟುಕೊಂಡು ನೂರಾರು ಹಿಂದೂಗಳ ಮೇಲೆ ದಾಳಿ ಮಾಡಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಕರಾಚಿಯಲ್ಲಿನ ಮಸೀದಿಯೊಂದರ ಹೊರಗೆ ಇಡಲಾಗಿದ್ದ ನೀರಿನ ತೊಟ್ಟಿಯಿಂದ ಬಾಲಕನೊಬ್ಬ ಬಾಯಾರಿಕೆಯಾಯಿತೆಂದು ನೀರು ಕುಡಿದಿದ್ದ. ಇದಕ್ಕಾಗಿ ಮುಸ್ಲಿಂ ಧರ್ಮೀಯರು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಸುಮಾರು 150ರಷ್ಟಿದ್ದ ಬುಡಕಟ್ಟು ಜನಾಂಗೀಯರು ದಾಳಿ ನಡೆಸಿದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿನ ಮೆಮೊನ್ ಗೋತ್ ಎಂಬಲ್ಲಿ ಸುಮಾರು 60ರಷ್ಟು ಹಿಂದೂ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಬಲವಂತವಾಗಿ ಸ್ಥಳಾಂತರಗೊಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಸೀದಿಯ ಹೊರಗಿದ್ದ ಕೂಲರ್‌ನಿಂದ ನನ್ನ ಮಗ ದಿನೇಶ ನೀರು ಕುಡಿದ ನಂತರ ಇದೆಲ್ಲ ನಡೆದಿದೆ. ನೀರು ಕುಡಿದಿದ್ದನ್ನು ನೋಡಿದ ನಂತರ ಆ ಪ್ರದೇಶದ ಜನ ನಮ್ಮನ್ನು ಥಳಿಸಿದ್ದಾರೆ ಎಂದು ಮೀರುಮಾಲ್ ಎಂಬ ಹಿಂದೂ ವ್ಯಕ್ತಿಯೊಬ್ಬ ಹೇಳಿದ್ದಾನೆಂದು 'ದಿ ನ್ಯೂಸ್' ಪತ್ರಿಕೆ ವರದಿ ಮಾಡಿದೆ.
ಹಿಂದೂಗಳಿಗೆ ಥಳಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದಂತೆ ಇಲ್ಲಿನ ದನದ ದೊಡ್ಡಿಯೊಂದಕ್ಕೆ 400 ಹಿಂದೂ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈಗ ನಮ್ಮನ್ನು ವಾಪಸ್ ಬರಬಾರದೆಂದು ಬೆದರಿಕೆ ಹಾಕುತ್ತಿದ್ದಾರೆ. ಈಗ ನಮ್ಮ ಮನೆಗಳಿಗೆ ಮರಳಲು ಕೂಡ ನಮಗೆ ಹೆದರಿಕೆಯಾಗುತ್ತಿದೆ. ನಮ್ಮನ್ನು ಕೊಂದೇ ಹಾಕುತ್ತಾರೆ ಎಂಬ ಭೀತಿಯಿರುವುದರಿಂದ ಇದೇ ಕೊಳಕು ದೊಡ್ಡಿಯಲ್ಲಿ ಕಾಲ ಕಳೆಯಬೇಕಾಗಿದೆ ಎಂದು ದಾಳಿಯಿಂದ ಗಾಯಗೊಂಡಿರುವ ಹೀರಾ ಎಂಬವರು ವಿವರಿಸಿದ್ದಾರೆ.
ಒಂದು ಕ್ಷುಲ್ಲಕ ಘಟನೆಯಿಂದಾಗಿ ಈ ಭಾಗದ ಜನತೆಯ ನಡುವೆ ಹಿಂಸಾಚಾರ ನಡೆದಿದೆ. ಎರಡೂ ಸಮುದಾಯದವರು ಅನಕ್ಷರಸ್ಥರಾಗಿರುವುದರಿಂದ ಇಲ್ಲಿ ಸಣ್ಣ ಘಟನೆಯು ಭುಗಿಲೆದ್ದಿದೆ ಎಂದು ಮೆಮೊನ್ ಗೋತ್ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅದೇ ಹೊತ್ತಿಗೆ ಈ ಭಾಗದ ಹಿಂದೂಗಳಿಗೆ ಭದ್ರತೆಯಿಲ್ಲ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಅವರು, ದೇಶದ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ತಾವು ಬಯಸಿದಾಗ ಮನೆಗಳಿಗೆ ಮರಳಬಹುದಾಗಿದೆ ಎಂದಿದ್ದಾರೆ.
ಅತ್ತ ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮೋಹನ್ ಲಾಲ್ ಮಾತನಾಡುತ್ತಾ, ಹಿಂದೂ ಸಮುದಾಯಕ್ಕೆ ಸರಕಾರದಿಂದ ಸಂಪೂರ್ಣ ರಕ್ಷಣೆಯಿದೆ. ನಿರಾಶ್ರಿತರಾಗಿರುವ ಹಿಂದೂಗಳು ಸುರಕ್ಷಿತವಾಗಿ ಮನೆಗಳಿಗೆ ಸೇರುವುದನ್ನು ಖಚಿತಪಡಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.