ಪಾಕಿಸ್ತಾನದ ಸುಮಾರು 29 ಶಾಸಕರು ಮತ್ತು ಸಚಿವರು ನಕಲಿ ಪದವಿ ಪ್ರಮಾಣಪತ್ರ ಹೊಂದಿರುವ ಅಂಶ ಬೆಳಕಿಗೆ ಬಂದಿದೆ. 2008ರ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೀಡಿದ್ದ ಪದವಿ ಪ್ರಮಾಣಪತ್ರ ನಕಲಿ ಎಂದು ದೇಶದ ಶೈಕ್ಷಣಿಕ ಸಂಸ್ಥೆ ನಡೆಸಿದ ತನಿಖೆಯಿಂದ ಪತ್ತೆ ಹಚ್ಚಿದೆ.
ಆ ನಿಟ್ಟಿನಲ್ಲಿ ಪ್ರಾಂತೀಯ ಮತ್ತು ನ್ಯಾಷನಲ್ ಅಸೆಂಬ್ಲಿಯ ಸುಮಾರು 12 ಮಂದಿ ಶಾಸಕ ಮತ್ತು ಸಚಿವರ ಪದವಿ ಪ್ರಮಾಣ ನಕಲಿ ಎಂಬುದು ಪತ್ತೆಯಾಗಿರುವ ನಿಟ್ಟಿನಲ್ಲಿ ಅದನ್ನು ಪರೀಶೀಲಿಸುವಂತೆ ಹೈಯರ್ ಎಜ್ಯುಕೇಷನ್ ಆಯೋಗಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಮತ್ತು ಸಂಸದೀಯ ಶೈಕ್ಷಣಿಕ ಸ್ಥಾಯಿ ಸಮಿತಿ ನಿರ್ದೇಶನ ನೀಡಿತ್ತು.
'ನಾವು ಶಾಸಕರು ಮತ್ತು ಸಚಿವರಿಂದ ಒಟ್ಟು 1065 ಪದವಿ ಪ್ರಮಾಣಪತ್ರಗಳನ್ನು ಪಡೆದಿದ್ದು, ಅದರಲ್ಲಿ 511 ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗಿದೆ. ಆದರೆ 29 ಮಂದಿ ಜನಪ್ರತಿನಿಧಿಗಳ ಪದವಿ ಪ್ರಮಾಣ ಪತ್ರ ನಕಲಿ ಎಂಬುದು ಪತ್ತೆಯಾಗಿದೆ' ಎಂದು ಹೈಯರ್ ಎಜ್ಯುಕೇಷನ್ ಆಯೋಗದ ಸಲಹೆಗಾರ ಮಹಮೂದ್ ರಾಜಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ನಕಲಿ ಪ್ರಮಾಣಪತ್ರ ಹೊಂದಿರುವ ಶಾಸಕರ ಹೆಸರನ್ನು ಬಹಿರಂಗಪಡಿಸಲು ರಾಜಾ ನಿರಾಕರಿಸಿದರು. ಅವರೆಲ್ಲ 2008ರಲ್ಲಿ ಪ್ರಾಂತೀಯ ಮತ್ತು ನ್ಯಾಷನಲ್ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಈ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದರು.
ಈ ಬಗ್ಗೆ ಆಯೋಗ ಅಂತಿಮ ವರದಿಯನ್ನು ಸಂಸದೀಯ ಆಯೋಗ ಮತ್ತು ಚುನಾವಣಾ ಆಯೋಗಕ್ಕೆ ಜುಲೈ 16ರಂದು ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ನಕಲಿ ಪ್ರಮಾಣಪತ್ರ ಹೊಂದಿರುವ ಸಚಿವ ಮತ್ತು ಶಾಸಕರ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಪಾಕ್ ರಾಜಕಾರಣದಲ್ಲಿ ಸಾಕಷ್ಟು ವಿವಾದದ ಅಲೆ ಹುಟ್ಟಿಸಿದೆ.