ಉಗ್ರರ ಭೀತಿ; 'ತೇರೆ ಬಿನ್ ಲಾಡೆನ್' ಬಿಡುಗಡೆಗೆ ಪಾಕ್ ನಕಾರ
ಇಸ್ಲಾಮಾಬಾದ್, ಬುಧವಾರ, 14 ಜುಲೈ 2010( 17:56 IST )
ಭಯೋತ್ಪಾದಕರು ದಾಳಿ ನಡೆಸಬಹುದು ಎಂಬ ಕಾರಣವನ್ನು ಮುಂದೊಡ್ಡಿರುವ ಚಲನಚಿತ್ರ ಸೆನ್ಸಾರ್ ಮಂಡಳಿ, ಲಾಹೋರ್ ಮೂಲದ ಆಲಿ ಜಾಫರ್ ನಟಿಸಿರುವ ಬಾಲಿವುಡ್ ಚಿತ್ರ 'ತೇರೆ ಬಿನ್ ಲಾಡೆನ್' ಬಿಡುಗಡೆ ಮಾಡಲು ನಿರಾಕರಿಸಿದೆ.
'ತೇರೆ ಬಿನ್ ಲಾಡೆನ್' ಚಿತ್ರದ ಮೂಲಕ ಪಾಕಿಸ್ತಾನದ ಪಾಪ್ ಗಾಯಕ ಜಾಫರ್ ಭಾರತೀಯ ಚಿತ್ರರಂಗದಲ್ಲಿ ಪದಾರ್ಪಣೆ ಮಾಡುತ್ತಿದ್ದು, ಜುಲೈ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿತ್ತು.
ಈ ಚಿತ್ರದಲ್ಲಿ ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನನ್ನು ಹೋಲುವ ಪಾತ್ರ ಇರುವುದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಪಾಕಿಸ್ತಾನ ಚಲನಚಿತ್ರ ಸೆನ್ಸಾರ್ ಮಂಡಳಿ ತಿಳಿಸಿದೆ.
ನಿನ್ನೆ ಚಿತ್ರವನ್ನು ನೋಡಿದ ಬಳಿಕ ಚಲನಚಿತ್ರ ಮಂಡಳಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಪ್ರಸಕ್ತ ಹೊಂದಿರುವ ಪರಿಸ್ಥಿತಿಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಯಾವುದೇ ಸಮರ್ಥನೆ ಸಿಗುತ್ತಿಲ್ಲ ಎಂದು ಸೆನ್ಸಾರ್ ಮಂಡಳಿಯ ಉಪಾಧ್ಯಕ್ಷ ಮಸೂದ್ ಇಲಾಹಿ ತಿಳಿಸಿದ್ದಾರೆ.
ಚಿತ್ರವನ್ನು ಬಿಡುಗಡೆ ಮಾಡುವುದರಿಂದ ಭಯೋತ್ಪಾದನಾ ದಾಳಿಗಳು ನಡೆಯಬಹುದು ಎಂಬ ಭೀತಿಯಲ್ಲಿ ಸೆನ್ಸಾರ್ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜಾಫರ್, ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಚಿತ್ರದ ಹಂಚಿಕೆಗಾಗಿ ಅವರು ನೂತನ ಕಂಪನಿಯೊಂದನ್ನೂ ಸ್ಥಾಪಿಸಿದ್ದರು.