26/11- ಮೊದ್ಲು ಕ್ರಮ ಕೈಗೊಳ್ಳಿ: ಪಾಕ್‌ಗೆ ಕೃಷ್ಣ ಖಡಕ್ ಮಾತು
ಇಸ್ಲಾಮಾಬಾದ್, ಗುರುವಾರ, 15 ಜುಲೈ 2010( 10:21 IST )
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ಬಗ್ಗೆ ಪಾಕಿಸ್ತಾನ ಒಳಗೊಂಡಂತೆ ಯಾರಿಗೂ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಖಡಕ್ ಆಗಿ ತಿಳಿಸಿದ್ದು, ಡೇವಿಡ್ ಹೆಡ್ಲಿ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿರುವ ಮಾಹಿತಿಯ ಆಧಾರದ ಮೇಲೆ ಮತ್ತು ಶಂಕಿತ ಎಂಟು ಮಂದಿ ಆರೋಪಿಗಳ ವಿರುದ್ದ ಮೊದಲು ಕ್ರಮ ಕೈಗೊಳ್ಳಿ ಎಂದು ಪಾಕ್‌ಗೆ ಎಚ್ಚರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಯುವ ಮುನ್ನ, ಕಾಶ್ಮೀರವನ್ನು ಹೊರತುಪಡಿಸಿ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ಈ ಮೊದಲು ಪದೇ,ಪದೇ ಹೇಳಿಕೆ ನೀಡಿತ್ತು. ಇದೀಗ ಅದಕ್ಕೆ ಸಚಿವ ಎಸ್.ಎಂ.ಕೃಷ್ಣ ಸೂಕ್ತ ತಿರುಗೇಟು ನೀಡಿದ್ದಾರೆ.
ಮುಂಬೈ ದಾಳಿ ನಂತರ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಬುಧವಾರ ಇಸ್ಲಾಮಾಬಾದ್‌ಗೆ ಭೇಟಿ ನೀಡಿರುವ ಎಸ್.ಎಂ.ಕೃಷ್ಣ ಅವರು ಕನ್ನಡ ದೈನಿಕಗಳಿಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನಡೆಯುವ ಹಿಂಸಾಚಾರ, ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವಿಚಾರಣೆ ನಡೆಸಲು, ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ರಾಜ್ಯ ಸರಕಾರ ನೋಡಿಕೊಳ್ಳುತ್ತದೆ. ಆ ಬಗ್ಗೆ ಪಾಕಿಸ್ತಾನಕ್ಕೆ ಚಿಂತೆ ಬೇಡ ಎಂದು ಸ್ಪಷ್ಟ ನುಡಿಯ ಮೂಲಕ ಪಾಕ್‌ಗೆ ಎಚ್ಚರಿಕೆ ನೀಡಿದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಹೊರಗಿನವರ ಕೈವಾಡ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಒಮರ್ ಅಬ್ದುಲ್ ಸಮರ್ಥರಾಗಿದ್ದಾರೆ. ಅಗತ್ಯವಾಗಿರುವ ಎಲ್ಲ ನೆರವು ನೀಡಲು ಕೇಂದ್ರ ಸಿದ್ದವಾಗಿದೆ ಎಂದರು.
ಮುಂಬೈ ದಾಳಿ ಕುರಿತಂತೆ ಅಮೆರಿಕದ ಬಂಧನದಲ್ಲಿರುವ ಡೇವಿಡ್ ಹೆಡ್ಲಿ ವಿಚಾರಣೆಯ ಹೇಳಿಕೆ ಆಧರಿಸಿ ನೀಡಲಾಗಿರುವ ಸಾಕ್ಷ್ಯಾಧಾರ, ಭಾರತದ ವಿರುದ್ಧ ಭಯೋತ್ಪಾದನೆಗೆ ಹಫೀಜ್ ಸಯೀದ್, ಸಲಾವುದ್ದೀನ್ ಕುಮ್ಮಕ್ಕಿನ ಬಗ್ಗೆ ಪಾಕ್ ಗಮನ ಸೆಳೆಯಲಾಗಿದೆ ಎಂದು ತಿಳಿಸಿರುವ ಸಚಿವರು, ಪಾಕಿಸ್ತಾನದಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.