ತನ್ನನ್ನು ಅಮೆರಿಕದ ಸಿಐಎ ಏಜೆಂಟ್ಸ್ ಅಪಹರಿಸಿದ್ದು, ಇರಾನ್‌ನ ನ್ಯೂಕ್ಲಿಯರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸುಮಾರು 5 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಹಣ ಪಾವತಿಸಿರುವುದಾಗಿ ಸ್ವದೇಶಕ್ಕೆ ಮರಳಿರುವ ಇರಾನ್ ನ್ಯೂಕ್ಲಿಯರ್ ವಿಜ್ಞಾನಿ ತಿಳಿಸಿರುವುದಾಗಿ ದಿ ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವೆ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಇರಾನ್ ವಿಜ್ಞಾನಿ ಶಾಹ್ರಾಮ್ ಅಮ್ರಿ ಅಪಹರಣ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಅಮ್ರಿ ಗುರುವಾರ ಇರಾನ್‌ಗೆ ಆಗಮಿಸಿದ್ದಾರೆ.
ಅಮೆರಿಕ ತನಗೆ ಹಣದ ಆಮಿಷ ಒಡ್ಡಿದ್ದರೂ ಕೂಡ ತಾನು ಅದನ್ನು ಸ್ವೀಕರಿಸಿಲ್ಲ ಎಂದಿರುವ ಅಮ್ರಿ, ಆದರೆ ತಾನು ಸಿಐಎ ಅಧಿಕಾರಿಗಳೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಸಹಕರಿಸಿಲ್ಲ. ಹಾಗಾಗಿ ಇದೀಗ ಸ್ವದೇಶಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ. ಆದರೆ ಅಮ್ರಿಯನ್ನು ಇರಾನ್ ಸರಕಾರದ ಕೋರಿಕೆಯ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆದರೆ ಹಣ ನೀಡಿರುವ ಬಗ್ಗೆ ಸಿಐಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಷ್ಟೇ ಅಲ್ಲ, ಅಮ್ರಿ ಅಮೆರಿಕ ಗುಪ್ತಚರ ಸಂಸ್ಥೆಯ ಜೊತೆ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ಕಾರ್ಯನಿರ್ವಹಿಸಿರುವುದಾಗಿ ಪೋಸ್ಟ್ ವರದಿ ವಿವರಿಸಿದೆ. ಆದರೆ ಅಮೆರಿಕ ಇರಾನ್ ವಿಜ್ಞಾನಿಯನ್ನು ಅಪಹರಿಸಿರುವುದಾಗಿ ಆರೋಪಿಸಿತ್ತು. ಅಮ್ರಿ ಸೌದಿ ಅರೆಬಿಯಾಕ್ಕೆ ಯಾತ್ರೆಗಾಗಿ ತೆರಳುತ್ತಿರುವ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಅಮ್ರಿ ಇರಾನ್‌ನ ಅಟೋಮಿಕ್ ಎನರ್ಜಿ ಆರ್ಗನೈಜೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅಮ್ರಿ ಅಪಹರಣದ ಆರೋಪವನ್ನು ಅಮೆರಿಕ ಸಾರಸಗಟಾಗಿ ತಳ್ಳಿಹಾಕಿದ್ದು, ಅವರು ಅಮೆರಿಕದಲ್ಲಿ ಮುಕ್ತವಾಗಿ ವಾಸಿಸುತ್ತಿದ್ದರು. ಆದರೆ ಅಮ್ರಿಯಿಂದ ಇರಾನ್ ನ್ಯೂಕ್ಲಿಯರ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪಡೆಯಲಾಗಿದೆ ಎಂದು ಅಮೆರಿಕ ತಿಳಿಸಿದೆ.