ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರವಾಸಿಗರೇ ತುಂಬಿದ್ದ ಪಾಕ್ ಬಸ್‌ಗೆ ದಾಳಿ; ಐವರ ಸಾವು
(Swat district | Pakistan | Khyber-Pakhtunkhwa province | Malakand division)
ಪಾಕಿಸ್ತಾನದ ವಾಯುವ್ಯದಲ್ಲಿನ ಸ್ವಾತ್ ಜಿಲ್ಲೆಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ ಮೇಲೆ ಆತ್ಮಾಹುತಿ ದಳದ ಬಾಂಬರ್ ದಾಳಿ ನಡೆಸಿದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, 44 ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಮಿಂಗೋರಾ ಎಂಬಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ಸನ್ನು ಗುರಿ ಮಾಡಿಕೊಂಡು ಬಾಂಬರ್ ದಾಳಿ ನಡೆಸಿದ್ದ. ಖೈಬರ್-ಪಾಕ್ತುಂಕ್ವಾ ಪ್ರಾಂತ್ಯದಲ್ಲಿ ಬರುವ ಸ್ವಾತ್ ಜಿಲ್ಲಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಗಾಯಗೊಂಡವರಲ್ಲಿ ಬಹುತೇಕ ಮಂದಿ ಪ್ರವಾಸಿಗಳು. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. 44 ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾತ್ ಸೇರಿದಂತೆ ಮಾಲಾಕಂಡ್‌ಗಳಲ್ಲಿನ ಪ್ರಕೃತಿದತ್ತ ಸೌಂದರ್ಯವನ್ನು ವೀಕ್ಷಿಸಲು ಬರುತ್ತಿರುವ ಪ್ರವಾಸಿಗರಿಗೆ ಇದರಿಂದ ಭಾರೀ ಹಿನ್ನಡೆಯಾಗಿದೆ. ಪಾಕಿಸ್ತಾನ ಸರಕಾರ ಯತ್ನಿಸುತ್ತಿದ್ದ ಪ್ರವಾಸೋದ್ಯಮದ ಚೇತರಿಕೆಗೂ ಇದರಿಂದ ದೊಡ್ಡ ಹೊಡೆದ ಬಿದ್ದಂತಾಗಿದೆ ಎಂದು ವರದಿಗಳು ಹೇಳಿವೆ.
ಸ್ಫೋಟದ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಘಟನೆ ನಡೆಯುತ್ತಿದ್ದಂತೆ ಉನ್ನತ ಮಟ್ಟದ ತನಿಖೆಗೆ ಇಲ್ಲಿನ ಪೊಲೀಸ್ ಮುಖ್ಯಸ್ಥರು ಆದೇಶ ನೀಡಿದ್ದಾರೆ.