ಜಪಾನ್‌ನ ಓಕಿನಾವಾದ ರೆಸ್ಟಾರೆಂಟ್ ಒಂದರ ಅಡಿಯಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಸಿದ 900ಕ್ಕೂ ಹೆಚ್ಚು ಜೀವಂತ ಬಾಂಬುಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.
ರಸ್ತೆ ಅಗಲೀಕರಣಕ್ಕೆಂದು ಅಗೆಯುತ್ತಿದ್ದ ಸಂದರ್ಭದಲ್ಲಿ ಲೋಹ ಪರಿಶೋಧಕ ಯಂತ್ರ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಸ್ಫೋಟಗೊಳ್ಳದ ಬಾಂಬುಗಳು ಪತ್ತೆಯಾಗಿವೆ ಎಂದು ಇಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಸುಮಾರು 902 ಜೀವಂತ ಬಾಂಬುಗಳನ್ನು ಜಪಾನ್‌ನ ಸೇನೆಯ ಬಾಂಬ್ ನಿಷ್ಕ್ರಿಯ ದಳವು ವಶಕ್ಕೆ ಪಡೆದುಕೊಂಡಿದೆ. ಇವೆಲ್ಲವೂ ಅಮೆರಿಕಾ ನಿರ್ಮಿತ ಬಾಂಬುಗಳು ಎಂದು ಹೇಳಲಾಗಿದೆ.
ಇಷ್ಟು ಪ್ರಮಾಣದ ಬಾಂಬುಗಳು ಒಂದೇ ಕಡೆ ಪತ್ತೆಯಾಗಿರುವುದು ಇದೇ ಮೊದಲು. ಆದರೂ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಭಾರೀ ಬಾಂಬುಗಳನ್ನು ಸುರಿದಿರುವುದರಿಂದ ಇಲ್ಲಿನ ಕಾರ್ಮಿಕರು ಸಾಮಾನ್ಯವಾಗಿ ಭೂಮಿಯನ್ನು ಅಗೆಯುವ ಮೊದಲು ಲೋಹ ಪರಿಶೋಧಕವನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.