ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಗಾಗಿ ಕುಳಿತಿದ್ದರು ಕೃಷ್ಣ! (India | Pakistan | Mumbai attacks | S M Krishna)
Bookmark and Share Feedback Print
 
ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ವಿರುದ್ಧ ನೇರವಾಗಿ ಪತ್ರಿಕಾಗೋಷ್ಠಿಯಲ್ಲೇ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಟೀಕಾ ಪ್ರಹಾರ ಮಾಡಿದರೂ ನಮ್ಮ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ತುಟಿ ಬಿಚ್ಚದೆ ಸಹನೆ ಮೆರೆದಿದ್ದಾರೆ.

ಇದು 'ಬಲವಂತದ ಮಾತುಕತೆ'ಗೆಂದು ಮೂರು ದಿನಗಳ ಪ್ರವಾಸಕ್ಕೆ ಹೋಗಿರುವ ಸಚಿವ ಕೃಷ್ಣ ನಿಯೋಗಕ್ಕೆ ಪಾಕಿಸ್ತಾನ ನೀಡಿರುವ ತೀರ್ಥ-ಪ್ರಸಾದ.

ಅಪರಾಹ್ನ 2.15ಕ್ಕೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿದ್ದ ಜಂಟಿ ಪತ್ರಿಕಾಗೋಷ್ಠಿ ತಡವಾಗಿ ಅಂದರೆ ರಾತ್ರಿ 9 ಗಂಟೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವದ್ವಯರು ಪರಸ್ಪರ ಆರೋಪಗಳಲ್ಲೇ ನಿರತರಾಗಿದ್ದುದು ಗಮನ ಸೆಳೆಯಿತಾದರೂ, ಪಾಕಿಸ್ತಾನದ ಟೀಕೆಗೆ ಭಾರತದ ಸಚಿವರು ಸುಮ್ಮನೆ ಏನೂ ಆಗಿಲ್ಲವೆಂಬಂತೆ ಕುಳಿತದ್ದು ಮಾತ್ರ ಅಸಹನೀಯವೆನಿಸಿದೆ.

ಪಿಳ್ಳೈ ಏನು ಹೇಳಿದ್ದರು?
2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಮತ್ತು ಹಫೀಜ್ ಸಯೀದ್ ಪ್ರಮುಖ ರೂವಾರಿಗಳು ಎಂದು ಅಮೆರಿಕಾ ಬಂಧನದಲ್ಲಿರುವ ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಹೇಳಿಕೆಯನ್ನು ಪಿಳ್ಳೈ ಬುಧವಾರವಷ್ಟೇ ಪುನರುಚ್ಛರಿಸಿದ್ದರು.

ಇತ್ತೀಚೆಗಷ್ಟೇ ಭಾರತದ ತನಿಖಾದಳಗಳು ಅಮೆರಿಕಾಕ್ಕೆ ತೆರಳಿ ಹೆಡ್ಲಿಯನ್ನು ವಿಚಾರಣೆ ನಡೆಸಿದ್ದವು. ಈ ಸಂದರ್ಭದಲ್ಲಿ ಹೆಡ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದೂ ಸೇರಿದಂತೆ ಹಲವು ಮಾಹಿತಿಗಳನ್ನು ಹೊರಗೆಡವಿದ್ದ.

ಸುಮ್ಮನಿದ್ದರು ನಮ್ಮ ಸಚಿವರು...
ಇದನ್ನೇ ಮುಂದಿಟ್ಟುಕೊಂಡ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, ಪಿಳ್ಳೈ ಆರೋಪ ಅನುಚಿತ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯೇ ಬರುತ್ತಿದ್ದವು. ಹಲವು ಪ್ರಶ್ನೆಗಳಿಗೆ ಸಚಿವರುಗಳು ಆಕ್ರೋಶ ಭರಿತ ಉತ್ತರಗಳನ್ನೇ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮುಂಬೈ ದಾಳಿಯಲ್ಲಿ ಐಎಸ್ಐ ಕೈವಾಡವಿದೆ ಎಂಬ ಪಿಳ್ಳೈ ಆರೋಪಕ್ಕೆ ಏನು ಹೇಳುತ್ತೀರಿ ಎಂಬ ಪ್ರಶ್ನೆ ಬಂದಿತ್ತು.

ಇದಕ್ಕೆ ಉತ್ತರಿಸಿದ ಖುರೇಷಿ, 'ಅವರ ಆರೋಪ ಅನುಚಿತವಾದದ್ದು, ಇದು ಉಭಯ ರಾಷ್ಟ್ರಗಳ ಸಚಿವರುಗಳ ಅಭಿಪ್ರಾಯ' ಎಂದರು. ಆದರೆ ಪಕ್ಕದಲ್ಲೇ ಕುಳಿತಿದ್ದ ಸಚಿವ ಕೃಷ್ಣ, ಭಾರತದ ಗೃಹ ಕಾರ್ಯದರ್ಶಿಯನ್ನು ಸಮರ್ಥಿಸಿಕೊಳ್ಳುವ ಅಥವಾ ಪಾಕಿಸ್ತಾನದ ಹೇಳಿಕೆಯನ್ನು ಆಕ್ಷೇಪಿಸುವ ಯಾವುದೇ ನಡೆಗೂ ಮುಂದಾಗದೆ ಅಚ್ಚರಿ ಹುಟ್ಟಿಸಿದರು.

ಭಾರತದ ಉನ್ನತ ಅಧಿಕಾರಿಯೊಬ್ಬರನ್ನು ಪಾಕಿಸ್ತಾನವು ಈ ರೀತಿ ನಡೆಸಿಕೊಂಡರೂ ಭಾರತದ ವಿದೇಶಾಂಗ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ