ಅರ್ಜೇಂಟೀನಾ ದೇಶ ಸಲಿಂಗ ವಿವಾಹಕ್ಕೆ ಹಸಿರು ನಿಶಾನೆ ತೋರಿದೆ. ಆ ಮೂಲಕ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಮೊದಲ ಲ್ಯಾಟಿನ್ ಅಮೆರಿಕಾ ರಾಷ್ಟ್ರ ಎಂದೆನಿಸಿಕೊಂಡಿದೆ.
ಅರ್ಜೆಂಟೀನಾದಲ್ಲಿ ಸಲಿಂಗ ವಿವಾಹದ ಪ್ರಕರಣವು ಎಷ್ಟು ಪ್ರಾಮುಖ್ಯತೆ ಪಡೆದಿತ್ತೆಂದರೆ ಸೆನೆಟ್‌ನಲ್ಲಿ ಮತದಾನ ನಡೆಯುವ ಸಂದರ್ಭದಲ್ಲಿ ಅಲ್ಲಿನ ರಾಷ್ಟ್ರೀಯ ಚಾನೆಲ್‌ಗಳು ನೇರ ಪ್ರಸಾರ ಮಾಡಿದ್ದವು.
ಈ ಹೊಸ ಕಾನೂನಿಗೆ ಸೆಂಟರ್-ಲೆಫ್ಟ್ ಸರಕಾರದ ಅಧ್ಯಕ್ಷ ಕ್ರಿಸ್ಟಿನಾ ಕ್ರಿರ್ಚ್‌ನೆರ್ ಬೆಂಬಲ ಸೂಚಿಸಿದ್ದರು. ಸುಮಾರು 15 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯ ಆನಂತರ ಮತದಾನ ನಡೆಸಲಾಗಿತ್ತು. ಒಟ್ಟು 33-27 ಮತಗಳ ಬಹುಮತ ಪಡೆಯುವ ಮೂಲಕ ಸಲಿಂಗ ವಿವಾಹ ಕಾನೂನಿಗೆ ಅಸ್ತು ನೀಡಲಾಯಿತು.
ಅರ್ಜೆಂಟೀನಾ ಪಾಲಿಗೆ ಇಂದೊಂದು ಐಸಿಹಾಸಿಕ ದಿನ ಎಂದು ಆಡಳಿತ ಪಕ್ಷದ ಮುಖಂಡ ಮಿಗ್ಯೂಲ್ ಪಿಚೆಟ್ಟೊ ತಿಳಿಸಿದರು.
ಸೆನೆಟ್‌ನಲ್ಲಿ ಕಾನೂನು ಪಾಸ್ ಆಗುವ ಸಂದರ್ಭದಲ್ಲಿ ಹೊರಗಡೆ ಜಮಾಯಿಸಿದ್ದ ಸಾವಿರಾರು ಸಲಿಂಗ ವಿವಾಹ ಬೆಂಬಲಿಗರು 'ಸಮಾನತೆ, ಸಮಾನತೆ' ಎಂಬ ಘೋಷಣೆ ಕೂಗಿ ಹರ್ಷವನ್ನಾಚರಿಸಿಕೊಂಡರು.