ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಕೃಷ್ಣ ರಾಯಭಾರ' ವಿಫಲ: ಭಾರತ ಮುಖಕ್ಕೆ ಪಾಕ್ ಮಸಿ (Indo-Pak talk | S M Krishna | Qureshi | Mumbai Attack | Dialogue)
Bookmark and Share Feedback Print
 
PTI
ಮುಂಬೈ ದಾಳಿಯಾಗಿ ಒಂದುವರೆ ವರ್ಷಗಳ ಬಳಿಕವೂ ಪಾಕಿಸ್ತಾನವನ್ನು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿಸುವಲ್ಲಿ ವಿಫಲವಾಗಿರುವ ಭಾರತದ ರಾಜತಾಂತ್ರಿಕ ವೈಫಲ್ಯ ಹಾಗೂ ಮತ್ತದೇ ಹಳೇ ಚಾಳಿಗೆ ಮರಳಿದ ಪಾಕಿಸ್ತಾನದ ಧೋರಣೆಗಳಿಂದಾಗಿ ಉಭಯ ದೇಶಗಳ ನಡುವೆ ಗುರುವಾರ ನಡೆದ ಮಾತುಕತೆ ನಿರೀಕ್ಷಿತವಾಗಿಯೇ ಮುರಿದುಬಿದ್ದಿದೆ. ಕೃಷ್ಣ 'ರಾಯಭಾರ' ವಿಫಲವಾಗಿದ್ದು, ಭಾರತವು ಪಾಕಿಸ್ತಾನದಿಂದ ಅವಮಾನ ಎದುರಿಸಬೇಕಾಯಿತು ಎಂದು ಪ್ರತಿಪಕ್ಷಗಳು ಕೂಗಾಡತೊಡಗಿವೆ.

ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕ್ ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ, ಭಾರತವು ಮಾತುಕತೆಗೆ ಸಿದ್ಧವೇ ಆಗಿರಲಿಲ್ಲ ಎಂದರಲ್ಲದೆ, ನಿರ್ದಿಷ್ಟ ವಿಷಯದ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಸಮಗ್ರ ಚರ್ಚೆಯ ಔದಾರ್ಯ ತೋರಲಿಲ್ಲ ಎಂದು ಆರೋಪಿಸಿದರು.

ತನಗೆ ಮಹತ್ವದ್ದು ಎಂದು ಹೇಳುವ ವಿಷಯಗಳತ್ತ ಮಾತ್ರವೇ ಭಾರತವು ಗಮನ ಕೇಂದ್ರೀಕರಿಸಿದರೆ, ಮಾತುಕತೆ ಫಲಪ್ರದವಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಖುರೇಷಿ ಹೇಳಿದರು.

ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಗಾಗಿ ಕುಳಿತಿದ್ದರು ಕೃಷ್ಣ! ಕ್ಲಿಕ್ ಮಾಡಿ.

ಕಾಶ್ಮೀರವೇ ನಮ್ಮ ಮಾತುಕತೆಗಳ ಭಾಗವಾಗಿದೆ. ಅದು ವಿವಾದಿತ ಪ್ರದೇಶ. ಮಾತುಕತೆಯಿಂದ ಕಾಶ್ಮೀರವನ್ನು ಹೊರತುಪಡಿಸುವುದು ಸಾಧ್ಯವೇ ಇಲ್ಲ ಎಂದ ಅವರು, ಪಾಕಿಸ್ತಾನಕ್ಕೆ ಕೂಡ ತನ್ನದೇ ಆದ ಹಿತಾಸಕ್ತಿಗಳಿದ್ದು, ಭಾರತವು ಅದನ್ನು ಕಡೆಗಣಿಸುವಂತಿಲ್ಲ ಎಂದರು.

ಖುರೇಷಿ ಅವರು ಮಾತುಕತೆಗಾಗಿ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಉಪಸ್ಥಿತಿಯಲ್ಲಿಯೇ ಭಾರತಕ್ಕೆ ಅವಮಾನಕರವಾದ ಹೇಳಿಕೆಗಳನ್ನು ನೀಡಿದ್ದು ಈ ಕೆಳಗಿನ ಪ್ರಮುಖ ಅಂಶಗಳಿಂದ.

* ಭಾರತ ವಿದೇಶಾಂಗ ಸಚಿವರು ಮಾತುಕತೆಯ ನಡುವೆಯೇ ದೆಹಲಿಯಿಂದ ಪದೇ ಪದೇ ಫೋನ್ ಕರೆಯ ಮೂಲಕ ಸಲಹೆಗಳನ್ನು ಪಡೆಯುತ್ತಿದ್ದರು. ನಾನು ಆತಿಥ್ಯ ವಹಿಸಿದ್ದೆನಾದ್ದರಿಂದ ಒಂದೇ ಒಂದು ಫೋನ್ ಕರೆಯನ್ನೂ ಸ್ವೀಕರಿಸಿರಲಿಲ್ಲ. ಇದು ನಮ್ಮ ಸಂಸ್ಕೃತಿಯೂ ಅಲ್ಲ.
* ಭಾರತವು ಉಭಯ ರಾಷ್ಟ್ರಗಳ ನಡುವಣ ಮಾತುಕತೆಗೆ ಸಿದ್ಧತೆ ಮಾಡಿಕೊಂಡು ಬಂದಿರಲಿಲ್ಲ. ಅದಕ್ಕೊಂದು ಗುರಿ ಇದ್ದಿರಲಿಲ್ಲ. ಆದರೆ ಪಾಕಿಸ್ತಾನವು ಎಲ್ಲ ವಿಷಯದಲ್ಲಿಯೂ ಮಾತುಕತೆ ನಡೆಸಲು ಸಿದ್ಧವಾಗಿತ್ತು. ಭಾರತಕ್ಕೆ ಸರಿಯಾದ ಮಾತುಕತೆಗಾಗಿ ಜನಾದೇಶವಿಲ್ಲದಿದ್ದರೆ, ನಾವು ಕಾಯಲು ಸಿದ್ಧ!
* ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಲಾಗುತ್ತದೆ, ಜನರು ಸಾಯುತ್ತಿದ್ದಾರೆ. ಇದನ್ನು ನೋಡಿಕೊಂಡು ಪಾಕಿಸ್ತಾನ ಸುಮ್ಮನಿರುವುದು ಸಾಧ್ಯವಿಲ್ಲ.
* ಭಾರತದ ವಿದೇಶಾಂಗ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿಕೆಯು 'ಅನುಚಿತವಾಗಿತ್ತು' ಎಂದು ನಾವಿಬ್ಬರೂ (ಖುರೇಷಿ + ಕೃಷ್ಣ) ಒಪ್ಪಿಕೊಂಡಿದ್ದೇವೆ.
* ಒಂದೇ ವಿಷಯದ ಬಗ್ಗೆ ಪಟ್ಟು ಹಿಡಿದರೆ ಮಾತುಕತೆ ಮುಂದುವರಿಸುವುದು ಅಸಾಧ್ಯ.

ಪಿಳ್ಳೈ ಅವರು ಅಮೆರಿಕದಲ್ಲಿ ಬಂಧಿತನಾಗಿರುವ ಲಷ್ಕರ್ ಉಗ್ರಗಾಮಿ ಡೇವಿಡ್ ಹೆಡ್ಲೀ ಹೇಳಿಕೆಯನ್ನು ಉಲ್ಲೇಖಿಸಿ, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದಿದ್ದರು. ಇದೇ ಪಿಳ್ಳೈಯನ್ನು ಖುರೇಷಿ, ಲಷ್ಕರ್ ಭಯೋತ್ಪಾದಕ ಹಫೀಜ್ ಸಯೀದ್‌ಗೆ ಹೋಲಿಸಿಯೂ ಹೇಳಿಕೆ ನೀಡಿದ್ದರು. ಆದರೆ ಎಸ್.ಎಂ.ಕೃಷ್ಣ ತಮ್ಮ ಅಧಿಕಾರಿಯನ್ನು ಸಮರ್ಥಿಸಿಕೊಳ್ಳುವುದರಲಿ, ಈ ಹೇಳಿಕೆಯ ಬಗ್ಗೆ ಒಂದಿನಿತೂ ಮಾತನಾಡಿರಲಿಲ್ಲ.

ಒಟ್ಟಿನಲ್ಲಿ ಮಾತುಕತೆಯೊಂದೇ ಪರಿಹಾರ ಎಂದು ಪದೇ ಪದೇ ಪಾಕ್ ಜೊತೆ ಮಾತುಕತೆಗೆ ಧಾವಿಸುತ್ತಿರುವ ಭಾರತಕ್ಕೆ, ಹಳೇ ಚಾಳಿ ಪ್ರದರ್ಶಿಸಿರುವ ಪಾಕಿಸ್ತಾನ ಮತ್ತೊಮ್ಮೆ ಚುರುಕು ಮುಟ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ