ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಈಗಲೂ ಪಾಕಿಸ್ತಾನದಲ್ಲಿಯೇ ಠಿಕಾಣಿ ಹೂಡಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೋಮವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಅಷ್ಟೇ ಅಲ್ಲ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಓಮರ್ ಕೂಡ ಪಾಕಿಸ್ತಾನದಲ್ಲಿಯೇ ಅಡಗಿರುವ ಶಂಕೆ ಇರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ಲಾಡೆನ್ ಪಾಕಿಸ್ತಾನದೊಳಗೆಯೇ ಇದ್ದಿರುವ ನಂಬಿಕೆ ನಮ್ಮದು. ಆದರೆ ನಾವು ಅಲ್ ಖಾಯಿದಾ ಮುಖಂಡರನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದು ಪಾಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಏತನ್ಮಧ್ಯೆ, ವಿಶ್ವದ ಮೋಸ್ಟ್ ವಾಟೆಂಟ್ ಟೆರರಿಸ್ಟ್ ಒಸಾಮಾ ಬಿನ್ ಲಾಡೆನ್ ಸಾವನ್ನಪ್ಪಿರುವುದಾಗಿ ಪಾಕಿಸ್ತಾನದ ಮುಖಂಡರು ಹೇಳುತ್ತಿದ್ದಾರೆ. ಆದರೆ ಲಾಡೆನ್ ತನ್ನ ಎರಡನೇ ಹಂತದ ಮುಖಂಡ ಐಮನ್ ಅಲ್ ಜವಾಹರಿ ಜೊತೆ ಪಾಕಿಸ್ತಾನದಲ್ಲಿಯೇ ಸೂಕ್ತ ರಕ್ಷಣೆಯೊಂದಿಗೆ ವಾಸಿಸುತ್ತಿರುವುದಾಗಿ ಅಮೆರಿಕ ತಿಳಿಸಿದೆ.
ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ರಹಸ್ಯ ಸ್ಥಳವೊಂದರಲ್ಲಿ ವಾಸಿಸುತ್ತಿರುವುದಾಗಿ ಸಿಐಎ ವರಿಷ್ಠ ಲೆಯೋನ್ ಪನ್ನೆಟ್ಟಾ ಕಳೆದ ತಿಂಗಳು ಶಂಕೆ ವ್ಯಕ್ತಪಡಿಸಿದ್ದರು.