ಫ್ರಾನ್ಸ್ ಸಂಸತ್‌ನ ಕೆಳಮನೆಯಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸುವ ಕಾಯ್ದೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನೂರಾರು ಮುಸ್ಲಿಮರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಫ್ರಾನ್ಸ್ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರುವ ಕಾಯ್ದೆಯ ಮಸೂದೆಗೆ ಗುರುವಾರ ಸಂಸತ್ ಅಂಕಿತ ಹಾಕಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸುವ ಮೂಲಕ ಫ್ರಾನ್ಸ್‌ನ ಮೌಲ್ಯವನ್ನು ಎತ್ತಿಹಿಡಿದಂತಾಗಿದೆ ಎಂದು ಫ್ರಾನ್ಸ್ ಅಭಿಪ್ರಾಯವ್ಯಕ್ತಪಡಿಸಿತ್ತು.
ಫ್ರಾನ್ಸ್‌ನಲ್ಲಿರುವ 64 ಮಿಲಿಯನ್ ಜನಸಂಖ್ಯೆಯಲ್ಲಿ ಐದು ಮಿಲಿಯನ್ ಮುಸ್ಲಿಮ್ ಜನರಿದ್ದಾರೆಂದು ನಂಬಲಾಗಿದೆ. ಅಲ್ಲದೇ ಯುರೋಪಿನ್‌ನ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಫ್ರಾನ್ಸ್‌ನಲ್ಲಿ ಬುರ್ಖಾ ಧಾರಣೆಗೆ ನಿಷೇಧ ಹೇರಿರುವುದು ಸರಿಯಲ್ಲ ಎಂದು ಪಾಕ್‌ನ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಭಾನುವಾರ ಜಮಾತ್ ಇ ಇಸ್ಲಾಮಿ ಪಕ್ಷದ ಧಾರ್ಮಿಕ ವರಿಷ್ಠ ಮೊಹಮ್ಮದ್ ಹುಸೈನಿ ಮೆಹನಾಟಿ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ, ಬುರ್ಖಾ ನಿಷೇಧಿಸಿರುವ ಫ್ರಾನ್ಸ್ ಕ್ರಮದ ವಿರುದ್ಧ ವಿಶ್ವಸಂಸ್ಥೆ ಕೂಡಲೇ ಮಧ್ಯಪ್ರವೇಶಿಸಿ, ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
'ಪಾಶ್ಚಾತ್ಯ ಧೋರಣೆಗೆ ಧಿಕ್ಕಾರ, ಬುರ್ಖಾ ನಿಷೇಧವನ್ನು ನಾವು ಖಂಡಿಸುತ್ತೇವೆ' ಎಂಬ ಬ್ಯಾನರ್ ಹಿಡಿದು ರಾಲಿಯಲ್ಲಿ ಫ್ರಾನ್ಸ್ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.