ಪಾಕಿಸ್ತಾನಕ್ಕೆ ಎರಡು ನ್ಯೂಕ್ಲಿಯರ್ ರಿಯಾಕ್ಟರ್ ಅನ್ನು ಮಾರಾಟ ಮಾಡಲು ಚೀನಾ ಮುಂದಾಗಿದ್ದು, ಇದು ಅಂತಾರಾಷ್ಟ್ರೀಯ ಪರಮಾಣು ನಿಶ್ಯಸ್ತ್ರೀಕರಣ ಸಮುದಾಯದ ಕಾನೂನು ಉಲ್ಲಂಘನೆಯಾಗಲಿದೆ ಎಂದು ಅಮೆರಿಕದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ ಆರೋಪಿಸಿದ್ದು, ಆ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಚೀನಾ ನ್ಯೂಕ್ಲಿಯರ್ ರಿಯಾಕ್ಟರ್ ಮಾರಾಟ ಮಾಡದಂತೆ ಅಮೆರಿಕ ಒತ್ತಡ ಹೇರಬೇಕೆಂದು ಒತ್ತಾಯಿಸಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಚೀನಾ ಪರಮಾಣು ಸಂಬಂಧಿ ನೆಲೆಯಲ್ಲಿ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರವನ್ನೂ ಅಮೆರಿಕ ವಿರೋಧಿಸಬೇಕು ಎಂದು ಅಮೆರಿಕದ ಖ್ಯಾತ ಚಿಂತಕ ಅಶ್ಲೈ ಟೆಲ್ಲಿಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಚೀನಾ ಪಾಕಿಸ್ತಾನಕ್ಕೆ ಪರಮಾಣು ನ್ಯೂಕ್ಲಿಯರ್ ಮಾರಾಟ ಮಾಡುವುದರಿಂದ ಸಾಕಷ್ಟು ತೊಂದರೆಗಳು ಉದ್ಭವಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ನಡುವಿನ ನ್ಯೂಕ್ಲಿಯರ್ ರಿಯಾಕ್ಟರ್ ಸ್ಥಾಪನೆ ಒಪ್ಪಂದ ಕುರಿತಂತೆ ವಿಶ್ವ ಸಮುದಾಯ ಗಮನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿಕೆ ನೀಡಿದ ಬೆನ್ನಲ್ಲೇ, ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.