ಸಿಡ್ನಿ: ಹಲ್ಲೆ ತಪ್ಪಿಸಲು ಹೋಗಿ ಪೆಟ್ಟು ತಿಂದ ಭಾರತೀಯ ವಿದ್ಯಾರ್ಥಿ
ಸಿಡ್ನಿ, ಮಂಗಳವಾರ, 20 ಜುಲೈ 2010( 15:25 IST )
ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುತ್ತಿದ್ದಾಗ, ಮಧ್ಯಪ್ರವೇಶಿಸಿ ತಪ್ಪಿಸಲು ಹೋದ ಮತ್ತೊಬ್ಬ ಭಾರತೀಯನ ಮೇಲೂ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮೆಲ್ಬೊರ್ನ್‌ನಲ್ಲಿ ಸೋಮವಾರ ನಡೆದಿದೆ.
ಹಲ್ಲೆಗೊಳಗಾಗಿರುವ ಭರತ್ ಥಾಪರ್‌ಗೆ ಇನ್ನು ಕೆಲವು ವಾರಗಳ ಕಾಲ ಮಾತನಾಡಲು ಸಾಧ್ಯವಾಗಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಥಾಪರ್ ಹರಿಯಾಣದ ಪಾಣಿಪತ್ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಆತ ಇತ್ತೀಚೆಗಷ್ಟೇ ಮೆಲ್ಬೊರ್ನ್ ಕಾಲೇಜಿನಲ್ಲಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ.
ಸೋಮವಾರ ರಾತ್ರಿ ಮೆಲ್ಬೊರ್ನ್ ದಾರಿಯಲ್ಲಿ ಆರು ಮಂದಿ ತಂಡವೊಂದು ಭಾರತೀಯನೊಬ್ಬನಿಗೆ ಹೊಡೆಯುತ್ತಿದ್ದರು. ಆ ಸಂದರ್ಭದಲ್ಲಿ ಥಾಪರ್ ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದಾಗ, ದಾಳಿಕೋರರು ಈತನ ಮೇಲೆ ತಿರುಗಿ ಬಿದ್ದು ಹಲ್ಲೆ ನಡೆಸಿದ್ದರು.
ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹಲ್ಲೆಕೋರರು ಪರಾರಿಯಾಗಿದ್ದರು. ಇದೊಂದು ಜನಾಂಗೀಯ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.