ಅಫಘಾನಿಸ್ತಾನದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ವಿನಿಯೋಗಿಸಲಿರುವ ಬಿಲಿಯನ್‌ಗಟ್ಟಲೆ ನಿಧಿಯನ್ನು ಬಳಸುವುದು ಹೇಗೆ ಎಂಬುದರ ಕುರಿತು ರೂಪುರೇಷೆ ನಿರ್ಧರಿಸಲು ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಕಾಬೂಲ್‌ನಲ್ಲಿ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಮಂಗಳವಾರ ಚಾಲನೆ ನೀಡಿದ್ದಾರೆ.
ಅಫ್ಘಾನಿಸ್ತಾನದ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಬಲಪಡಿಸುವುದು, ರಾಜಕೀಯ ಸುಧಾರಣೆ, ತಾಲಿಬಾನ್ ಭಯೋತ್ಪಾದಕರ ಜತೆ ಸಾಮರಸ್ಯ ಸಾಧಿಸುವುದು ಮತ್ತು ಆಡಳಿತದಲ್ಲಿ ಪ್ರಗತಿ ಸೇರಿದಂತೆ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ತೊಲಗಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ರೂಪಿಸಲು 70 ಅಂತಾರಾಷ್ಟ್ರೀಯ ಪ್ರತಿನಿಧಿಗಳು ಕಾಬೂಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ಈ ಅಂತಾರಾಷ್ಟ್ರೀಯ ಸಮಾವೇಶದಲ್ಲಿನ ನಿಯೋಗದಲ್ಲಿ 40 ದೇಶಗಳ ವಿದೇಶಾಂಗ ಸಚಿವರುಗಳು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಸಹಿತ ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ 11 ಪ್ರತಿನಿಧಿಗಳು ಸೇರಿದಂತೆ 57 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಕರ್ಜೈ ಮತ್ತು ಬಾನ್ ಅವರಿಂದ ಉದ್ಘಾಟನೆಗೊಂಡ ಈ ಸಮಾವೇಶದಲ್ಲಿನ ವೇದಿಕೆಯಲ್ಲಿ ವಿಶ್ವಸಂಸ್ಥೆಯ ಅಫಘಾನಿಸ್ತಾನಕ್ಕಾಗಿನ ರಾಯಭಾರಿ ಸ್ಟಾಫನ್ ಡೆ ಮಿಸ್ತುರಾ ಮತ್ತು ಅಫ್ಘಾನ್ ಹಣಕಾಸು ಸಚಿವ ಹಜ್ರತ್ ಒಮರ್ ಜಾಕೈವಾಲ್ ಮುಂತಾದವರು ಆಸೀನರಾಗಿದ್ದರು.
ಪಾಕ್ ಮತ್ತು ಭಾರತದ ವಿದೇಶಾಂಗ ಸಚಿವರುಗಳಾದ ಶಾಹ್ ಮೆಹಮೂದ್ ಖುರೇಷಿ ಮತ್ತು ಎಸ್.ಎಂ. ಕೃಷ್ಣ ಕೂಡ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.