ಭಾರತೀಯ ಉಗ್ರ ರಂಜನ್ ಚೌಧುರಿ ಮತ್ತು ಆತನ ಸಹಚರನನ್ನು ಬಂಧಿಸಿರುವುದಾಗಿ ಬಾಂಗ್ಲಾ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದು, ನಾಲ್ಕು ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಕಿಶೋರ್‌ಗಂಜ್ ಕೋರ್ಟ್ ಇಬ್ಬರನ್ನೂ 3 ದಿನಗಳ ಕಾಲ ಅರೆಸೇನಾಪಡೆಯ ರಾಪಿಡ್ ಆಕ್ಷನ್ ಬೆಟಾಲಿಯನ್‌ನ ವಶಕ್ಕೆ ಒಪ್ಪಿಸಿದೆ.
ಚೌಧುರಿ ವಿರುದ್ಧ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಚೌಧುರಿ ಮೇಜರ್ ರಂಜನ್, ಪ್ರದೀಪ್ ರಾಯ್, ಡಿಪ್ ಜ್ಯೋತಿ, ರಂಜು ಬಾರೈ ಮತ್ತು ಮಾಸುದ್ ಚೌಧುರಿ ಸೇರಿದಂತೆ ವಿವಿಧ ಅಡ್ಡಹೆಸರನ್ನು ಇಟ್ಟುಕೊಂಡಿರುವುದಾಗಿ ನ್ಯೂ ಏಜ್ ಪತ್ರಿಕೆ ವರದಿ ತಿಳಿಸಿದೆ.
ಉಲ್ಫಾ ಸಂಘಟನೆಯ ಚೌಧುರಿ (46) ಹಾಗೂ ಆತನ ನಿಕಟವರ್ತಿ ಪ್ರದೀಪ್ ಮಾರಾಕ್ (57) ಇದೀಗ ಬಾಂಗ್ಲಾ ಪೊಲೀಸರ ಅತಿಥಿಯಾಗಿದ್ದಾರೆ. ಚೌಧುರಿ, ಮುಸ್ಲಿಮ್ ಹೆಸರನ್ನು ಇಟ್ಟುಕೊಂಡು ಬಾಂಗ್ಲಾದಲ್ಲಿ ಚಟುವಟಿಕೆ ನಡೆಸುತ್ತಿದ್ದ. ಅಲ್ಲದೇ ಈತ ಸ್ಥಳೀಯ ಯುವತಿಯೊಂದಿಗೆ ವಿವಾಹವಾಗಿದ್ದ.
ಉಲ್ಫಾ ಮಿಲಿಟರಿ ಘಟಕದ ವರಿಷ್ಠ ಪರೇಶ್ ಬರುವಾ ಕೂಡ ಬಾಂಗ್ಲಾದೇಶದಲ್ಲಿ ಠಿಕಾಣಿ ಹೂಡಿದ್ದು, ಆತ ಕೂಡ ಬಾಂಗ್ಲಾ ಯುವತಿಯನ್ನು ಮದುವೆಯಾಗಿ ಮದುವೆಯಾಗಿರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.